*ಗದಗಿನ ಹದ್ದಣ್ಣವರ, ಮುಂಡಗೋಡ ಮೂಲದ ನಾಲ್ವರು ಬಲೆಗೆ*
ಹುಬ್ಬಳ್ಳಿ: ಆರ್ ಟಿ ಐ ಕಾರ್ಯಕರ್ತರ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ದೋಚುತ್ತಿದ್ದ ಐವರನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋ ಆಪರೇಟಿವ್ ಬ್ಯಾಂಕುಗಳು, ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಗದಗ ಮೂಲದ ಮಂಜುನಾಥ ಹದ್ದಣ್ಣನವರ, ಮುಂಡಗೋಡ ಮೂಲದ ವೀರೇಶ್ಕುಮಾರ ಲಿಂಗದಾಳ, ಮಹದೇಶ್ವರ ಲಿಂಗದಾಳ, ಮಹಾಬಲೇಶ್ವರ ಶಿರೂರ, ಶಿವಪ್ಪ ಬೊಮ್ಮನಳ್ಳಿ ಇವರುಗಳೇ ಬಂಧಿತರಾದವರಾಗಿದ್ದಾರೆ.
ಗೋಕುಲ ರೋಡ್ನಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ ಆಪ್ ಸೊಸೈಟಿ ಹೆಡ್ ಮತ್ತು ಮ್ಯಾನೇಜರ್ ಇವರುಗಳಿಗೆ ಗದಗ ಮೂಲದ ಮಂಜುನಾಥ ಹದ್ದಣ್ಣವರ ಈತನು ಸುಳ್ಳು ಆರೋಪ ಮಾಡಿ 1.5 ಕೋಟಿ ರೂಗೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಮುಖ ಆರೋಪಿ ಹದ್ದಣ್ಣವರ ಅಲ್ಲದೇ ಉಳಿದ ಆರೋಪಿಗಳನ್ನು ಬಂಧಿಸಿದ್ದು ಇವರಿಂದ 1.70 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ ದಾಖಲಾದ ಕೂಡಲೇ ಜಾಡು ಹಿಡಿದು ಬೆನ್ನು ಹತ್ತಿದ ಇನ್ಸಪೆಕ್ಟರ್ ಪ್ರವೀಣ ನೀಲಮ್ಮನವರ ತಂಡ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ ಕೆಲವರು ಈ ತಂಡದಲ್ಲಿದ್ದು ಅವರಿಗಾಗಿ ಜಾಲ ಬೀಸಲಾಗಿದೆ.




