ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ರೋಟರಿ ಕ್ಲಬ್ ಆಫ್ ಸೆಂಟ್ರಲ್, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಆಶ್ರಯದಲ್ಲಿ ದಕ್ಷಿಣ ಭಾರತದ ಮೊದಲ ‘ಫ್ಲೈಬ್ರರಿ’ (ಗ್ರಂಥಾಲಯ)ಭಾನುವಾರ ಉದ್ಘಾಟನೆಗೊಂಡಿತು.

ಶಾಸಕ ಮಹೇಶ ಟೆಂಗಿನಕಾಯಿ ಗ್ರಂಥಾಲಯಕ್ಕೆ ಚಾಲನೆ ನೀಡಿ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ತಾಸುಗಟ್ಟಲೆ ಇಲ್ಲಿ ವೇಳೆ ಕಳೆಯಬೇಕಾಗುತ್ತದೆ. ಇವರ ಸಮಯ ಇನ್ಮುಂದೆ ಸದುಪಯೋಗವಾಗಲಿ ಎಂದರಲ್ಲದೆ ಓದಿನಿಂದ ಜ್ಞಾನ ಬೆಳೆಯುತ್ತದೆ.ಉತ್ತಮ ವಿಚಾರಗಳು ಮೂಡುತ್ತವೆ. ಇದರಿಂದ ರಚನಾತ್ಮಕ ಕಾರ್ಯಗಳು ಆಗುತ್ತವೆ. ಅದಕ್ಕಾಗಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬುದು ಎಲ್ಲೆಡೆ ಪ್ರಚಾರವಾಗಬೇಕಿದೆ ಎಂದು ಹೇಳಿ ತಾವೂ ಗ್ರಂಥಾಲಯಕ್ಕೆ 50 ಉತ್ತಮ ಪುಸ್ತಕಗಳನ್ನು ನೀಡುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ರೋಟರಿ ಡಿಸ್ಟ್ರಿಕ್ ಗವರ್ನರ್ ಅರುಣ ಭಂಡಾರೆ ಮಾತನಾಡಿ, ರೋಟರಿಯಿಂದ ಹಲವಾರು ವಿಧಾಯಕ ಕಾರ್ಯಗಳು ನಡೆಯುತ್ತವೆ.ಇಲ್ಲಿನ ಗ್ರಂಥಾಲಯವು ಎಲ್ಲ ಪ್ರಯಾಣಿಕರಿಗೂ ತಲುಪಲಿ ಎಂದು ಆಶಿಸಿದರು.
ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ ಕುಮಾರ ಮಾತನಾಡಿ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫ್ಲೈಬ್ರರಿ ಆಗಲು ರೋಟರಿ ಕ್ಲಬ್ ಆ್ ಸೆಂಟ್ರಲ್ ಹಾಗೂ ಡಾ. ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಮುಂದೆ ಬಂದಿತು. ಗ್ರಂಥಾಲಯದ ಆಲೋಚನೆ ಹಾಗೂ ಯೋಜನೆ ಭಾರತದಲ್ಲಿಯೇ ಮೊದಲನೆಯದು. ಕೆಲವು ತಾಂತ್ರಿಕ ಅಡಚಣೆಯಿಂದಾಗಿ ತಡವಾಯಿತು. ಸಧ್ಯ ದಕ್ಷಿಣ ಭಾರತದಲ್ಲಿಯೇ ಇದು ಪ್ರಥಮವಾಯಿತು ಎಂದರು.
ಗ್ರಂಥಾಲಯದ ಆಲೋಚನೆ,ರೂಪರೇಷೆ ಹಾಗೂ ಕಾರ್ಯರೂಪಕ್ಕೆ ತಂದ ಬಗೆಯನ್ನು ರೋಟರಿ ಮಾಜಿ ಅಧ್ಯಕ್ಷೆ ರೀಟಾ ಹಂಡಾ ಹಾಗೂ ಡಾ.ವೀರೇಶ ಹಂಡಿಗಿ ವಿವರಿಸಿದರು.
ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ 100 ಪುಸ್ತಕಗಳನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ,ರೋಟರಿಯಿಂದ 100 ಪುಸ್ತಕಗಳನ್ನು ರೋಟರಿ ಸದಸ್ಯರು ಹಸ್ತಾಂತರಿಸಿದರು.

ವಿಮಾನ ನಿಲ್ದಾಣ ಅಧಿಕಾರಿ ಬಿ.ವಿ.ಪ್ರತಾಪ, ಮಾಧವಿ ಭಂಡಾರಿ, ದೀಪಕ ಪಾಟೀಲ, ನಾಗರಾಜ ಶೆಟ್ಟಿ, ವಾಸೂಕಿ ಸಂಜಿ, ರಾಜೇಶ್ವರಿ ವಾಸುಕಿ, ಸಂಜನಾ ಮಹೇಶ್ವರಿ, ಆಶಾ ಸಾಲಿಯಾನ ಇತರರು ಪಾಲ್ಗೊಂಡಿದ್ದರು. ರೋಟರಿ ಸೆಂಟ್ರಲ್ ಅಧ್ಯಕ್ಷೆ ಅಂಜನಾ ಬಸನಗೌಡರ ಸ್ವಾಗತಿಸಿದರು. ಸುನಿತಾ ಕಲ್ಲೊಳಿ ನಿರೂಪಿಸಿದರು. ಶ್ರಾವಣಿ ಪವಾರ ವಂದಿಸಿದರು.



