*ಮಾಜಿ ಸಿಎಂ ಬೊಮ್ಮಾಯಿಗೆ ತುಟ್ಟಿಯಾದ ಯತ್ನಾಳ, ಜೋಶಿ ದ್ವೇಷ ಭಾಷಣ, ಅತಿಯಾದ ವಿಶ್ವಾಸ*
*ಕರ್ನಾಟಕ ಉಪ ಸಮರ : ಕಾಂಗ್ರೆಸ್ ಕ್ಲೀನ್ ಸ್ವೀಪ್ / ಬಿಜೆಪಿ, ಜೆಡಿಎಸ್ ಗೆ ಮುಖಭಂಗ*
ಹುಬ್ಬಳ್ಳಿ : ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಗೆಲುವಿನ ಕೇಕೆ ಹಾಕಿದ್ದು ತೀವ್ರ ಆಂತರಿಕ ಸಂಘರ್ಷ ಎದುರಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ಗಳು ಅತಿ ದೊಡ್ಡ ಮುಖಭಂಗ ಅನುಭವಿಸಿವೆ. ವಕ್ಫ್, ಮುಡಾ, ವಾಲ್ಮೀಕಿ ಮುಂತಾದ ವಿಷಯಗಳು ಲೆಕ್ಕಕ್ಕೇ ಇಲ್ಲದಂತೆ ಮತದಾರ ತೀರ್ಪು ನೀಡಿದ್ದು, ಗ್ಯಾರಂಟಿಗಳ ಬಗೆಗಿನ ಅಪಪ್ರಚಾರಕ್ಕೂ ಯಾರೂ ಕಿವಿಗೊಟ್ಟಿಲ್ಲವಾಗಿದ್ದು ಕುಟುಂಬ ರಾಜಕಾರಣ ರಾಜಕೀಯದ ವಿರುದ್ಧ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ವಿರುದ್ದ ತೀರ್ಪು ನೀಡಿದ್ದು ಎಚ್.ಡಿ.ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರಿಗೂ ಮರೆಯಲಾರದ ಪಾಠ ಕಲಿಸಿದ್ದಾರೆ.
ಸಂಡೂರಿನಲ್ಲಿ ನಿರೀಕ್ಷೆಯಂತೆಯೇ ತುಕಾರಾಂ ಪತ್ನಿ ಅನ್ನಪೂರ್ಣ ಅವರನ್ನು 9645ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಸಚಿವ ಸಂತೋಷ ಲಾಡ್ ಪಾತ್ರ ಬಹು ದೊಡ್ಡದಿದ್ದು, ಚನ್ನಪಟ್ಟಣದ ಗೊಂಬೆಯಾಟದಲ್ಲಿ ಎಲ್ಲರ ನಿರೀಕ್ಷೆ ಹುಸಿ ಮಾಡಿ ಸೈನಿಕ ಸಿ.ಪಿ.ಯೋಗೇಶ್ವರ 25,357 ಮತಗಳ ಅಂತರದಿಂದ ನಿಖಿಲ್ ಕುಮಾರಸ್ವಾಮಿಗೆ ಮೂರನೇ ಬಾರಿಗೆ ಸೋಲಿನ ರುಚಿ ತೋರಿಸಿದ್ದು, ಒಕ್ಕಲಿಗರ ಸಾಮ್ರಾಜ್ಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ ಅಧಿನಾಯಕ ಎಂಬ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ.
2008ರಿಂದ ಸತತವಾಗಿ ಶಿಗ್ಗಾಂವಿ ಕ್ಷೇತ್ರವನ್ನು ನಾಲ್ಕು ಬಾರಿ ಗೆದ್ದು ಬೀಗಿದ್ದಲ್ಲದೇ ಕಳೆದ ಸಲ ಮುಖ್ಯಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದ ಬಸವರಾಜ ಬೊಮ್ಮಾಯಿ ಸಂಸತ್ತಿಗೆ ಬಲಗಾಲಿಟ್ಟ ನಂತರ ಖಾಲಿಯಾಗಿದ್ದ ಸ್ಥಾನಕ್ಕೆ ಮಗ ಭರತನ ಪಟ್ಟಾಭಿಷೇಕಕ್ಕೆ ಮುಹೂರ್ತವಿಟ್ಟು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ಗೆಲುವಿನ ದಡ ಮುಟ್ಟಿಸುವ ಅವರ ಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ ಪಠಾಣ ಒಂದು ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದಲ್ಲದೇ ಮಾಜಿ ಸಿಎಂ ಪುತ್ರನನ್ನು 13,448 ಮತಗಳಿಂದ ಚಿತ್ ಮಾಡುವ ಮೂಲಕ ತಾನು ಅಕ್ಷರಶಃ ಪೈಲ್ವಾನ್ ಎಂಬುದನ್ನು ಸಾಭೀತುಪಡಿಸಿದ್ದು ಕಳೆದ ವಿಧಾನಸಭೆ ಚುನಾವಣೆಯ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿದ್ದಾರೆ.
ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಮುದುಡಲು ಪ್ರಮುಖ ಕಾರಣ ಕಾಂಗ್ರೆಸ್ನ ತಂತ್ರಗಾರಿಕೆ. ಚುನಾವಣೆ ಘೋಷಣೆಯಾದಾಗಿನಿಂದ ಸಚಿವ ಸತೀಶ ಜಾರಕಿಹೊಳಿ ಹೆಣೆದ ಜಾಲ, ಹರ್ ಘರ್ ಪಠಾಣ ಅಭಿಯಾನ, ಮತ್ತು ಮುಸ್ಲಿಂ ಮತಗಳ ಧೃವಿಕರಣದಲ್ಲಿ ಸಚಿವ ಜಮೀರ ಅಹ್ಮದ ವಹಿಸಿದ ಪಾತ್ರ, ಸಿಎಂ ಸಿದ್ದರಾಮಯ್ಯ ಅಹಿಂದ ಅಸ್ತ್ರ, ಎಲ್ಲ ಸಚಿವರು, ಶಾಸಕರು ತಮಗೆ ಕೊಟ್ಟ ಕೆಲಸವನ್ನು ಚಾಚು ತಪ್ಪದೆ ಮಾಡಿದ ಪರಿಣಾಮ ಒಂದೂವರೆ ದಶಕದ ಬಳಿಕ ಕಾಂಗ್ರೆಸ್ ಮತ್ತೆ ಪಾರಮ್ಯ ಮೆರೆದಿದೆ. ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿ ಆತಂಕಕ್ಕೆ ಕಾರಣವಾಗಿದ್ದ ಅಜ್ಜಂಪೀರ ಖಾದ್ರಿಯ ನಾಮಪತ್ರ ಹಿಂತೆಗಿಸಿ ಸೂಕ್ತ ಸ್ಥಾನಮಾನದ ಭರವಸೆ ನೀಡಿದ್ದಲ್ಲದೇ ಸಕ್ರೀಯವಾಗಿ ಅವರನ್ನು ಪಠಾಣ ಗೆಲ್ಲಿಸಲು ಬಳಸಿಕೊಂಡಿದ್ದು ಸಹ ಅನುಕೂಲಕರವಾಗಿ ಪರಿಣಮಿಸಿತು. ಕಳೆದ ಲೋಕ ಸಮರದಲ್ಲಿ ಕೈ ಅಭ್ಯರ್ಥಿ ವಿನೋದ ಅಸೂಟಿಗೆ 8 ಸಾವಿರಕ್ಕೂ ಹೆಚ್ಚು ಲೀಡ್ ಕೊಟ್ಟಿದ್ದ ಕ್ಷೇತ್ರದಲ್ಲಿ ಈ ಬಾರಿ ಅದಕ್ಕಿಂತ ಐದು ಸಾವಿರ ಹೆಚ್ಚು ಲೀಡ್ ದೊರಕಿದ್ದು ಮತದಾರರು ಕಣ್ಣು ಮುಚ್ಚಿ ಕೂತಿರುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಯಿತು.ಜಾರಕಿಹೊಳಿ ಟೀಮ್ ಶಿಗ್ಗಾಂವಿಗೆ ಕಾಲಿಟ್ಟ ದಿನ ನಾವು ಗುಲಾಲು ಹಾಕಿಸಿಕೊಳ್ಳದೇ ಹಿಂತಿರುಗುವುದಿಲ್ಲ ಎಂಬ ಮಾತು ನೂರಕ್ಕೆ ನೂರು ನಿಜವಾಯಿತು.
ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ಕೊಡಿಸಿದ ಮೊದಲ ದಿನ ಪ್ರಬಲ ಸಮುದಾಯದ ನಿಷ್ಟಾವಂತ ಕಾರ್ಯಕರ್ತರೊಬ್ಬರು ಆಡಿದ ಮಾತು ಇಡೀ ಫಲಿತಾಂಶಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ‘ಬೇರೆ ಪಕ್ಷದಿಂದ ಬಂದ ಬಸವರಾಜ ಬೊಮ್ಮಾಯಿವರನ್ನು ನಾಲ್ಕು ಬಾರಿ ಗೆಲ್ಲಿಸಿದೆವು. ಅಲ್ಲದೇ ಸಂಸತ್ತಿಗೆ ಸ್ಪರ್ಧಿಸಿದಾಗ ಆಗಲೂ ಕೈ ಬಿಡಲಿಲ್ಲ. ಅವರ ಆಯ್ಕೆ ನಂತರ ನಿಷ್ಟ ಕಾರ್ಯಕರ್ತರೊಬ್ಬರಿಗೆ ಶಿಗ್ಗಾಂವಿ ದಕ್ಕುವುದೆಂಬುದು ಹುಸಿಯಾಯಿತು. ಇನ್ನು ಅವರಿಗೆ ಮತ ಹಾಕುವುದಿಲ್ಲ’ ಎಂಬ ಮಾತು ಸುಳ್ಳಾಗಲೇ ಇಲ್ಲ.
ಈ ಹಿಂದೆ ಸೋಮಣ್ಣ ಬೇವಿನಮರದರಿಗೆ ಆಣೆ ಮಾಡಿ ಎಡಗಿವಿಗೆ ಹೂವಿಟ್ಟಿದ್ದರು. ಈ ಬಾರಿ ಕಳೆದ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಕಾಂತ ದುಂಡಿಗೌಡ್ರಗೂ ಬಲಗೈಗೆ ಹೂವಿಟ್ಟು ಅಂತಿಮವಾಗಿ ವರಿಷ್ಠರ ಆದೇಶವೆಂದು ಹೇಳಿ ಮಗನಿಗೆ ಟಿಕೆಟ್ ತಂದಾಗಲೇ ಬಂಡುಕೋರರಾಗಿ ಸ್ಪರ್ಧೆ ಮಾಡದೇ ಹೋದರೂ ಚುನಾವಣೆಯಿಂದ ದೂರ ಉಳಿಯುವುದನ್ನು ಬಹಿರಂಗವಾಗಿ ಘೋಷಿಸಿ ಹೊರಗುಳಿದಿದ್ದು ಅದೂ ಸಹ ಅಂಡರ್ ಕರೆಂಟ್ ಆಗಿ ಪ್ರವಹಿಸಿದೆ. ಅವರನ್ನು ಕರೆತರುವ ಸಣ್ಣ ಯತ್ನವೂ ನಡೆಯಲಿಲ್ಲ.
ಮಗನ ಗೆಲುವಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಅಡ್ಡಾಡಿದ ಬಸವರಾಜ ಬೊಮ್ಮಾಯಿ , ಪ್ರಭಾವಿ ನಾಯಕರ ದಂಡನ್ನೇ ಕರೆಸಿ ಪ್ರಚಾರ ಮಾಡಿಸಿದರೂ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗಳು ಮುಳುವಾಗಿ ಪರಿಣಮಿಸಿದವು. ಪಕ್ಷ ಯಾವುದೇ ಇರಲಿ ಸವಣೂರ, ಬಂಕಾಪುರ ಮುಂತಾದ ಪ್ರದೇಶಗಳ ಸುಮಾರು 10ರಿಂದ 12 ಸಾವಿರ ಮತಗಳ ಬೊಮ್ಮಾಯಿ ಬುಟ್ಟಿಗೆ ಯಾವಾಗಲೂ ಬೀಳುತ್ತಲೆ ಬಂದವುಗಳಾಗಿದ್ದು ಆದರೆ ಈ ಬಾರಿ ಯತ್ನಾಳ ಬಂದು ಬೊಬ್ಬಿರಿದು ’ಕಾಶಿಂ ಸಾಬ ನ ಮತವೂ ಬೇಡ , ಹಾಷ್ಯಂ ಸಾಬನ ಮತವೂ ಬೇಡ’ ಎಂದು ಹೇಳಿ ಮುಸ್ಲಿಂ ಮತಗಳೆ ಬೇಡ ಎಂಬರ್ಥದಲ್ಲಿ ಹೇಳಿದ್ದು ಕ್ಷೇತ್ರದ ಕಟ್ಟಾ ಬೊಮ್ಮಾಯಿ ಬೆಂಬಲಿಗರೂ ಸಹ ಇವಿಎಂನಲ್ಲಿ ಹಸ್ತಕ್ಕೆ ಒತ್ತುವಂತಾಯಿತು. ಅಲ್ಲದೇ ಜೋಶಿಯವರೂ ಮುಸ್ಲಿಂರನ್ನೂ ಅಲ್ಲದೇ ವಕ್ಫ್ ವಿಷಯವಿಟ್ಟು ಮಾಡಿದ ಭಾಷಣ ಎಡವಟ್ಟು ಮಾಡಿತು. ಅಲ್ಲದೇ ಪಠಾಣ ಲೆಕ್ಕಕ್ಕೆ ಇಲ್ಲ ಎಂಬಂತೆ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದು ಮುಳುವಾಗಿ ಪರಿಣಮಿಸಿತು.
*ಇತಿಹಾಸ ಪುನರಾವರ್ತನೆ* : ತಂದೆ ಬಸವರಾಜ ಬೊಮ್ಮಾಯಿ ಅವರಂತೆಯೆ ಮಗ ಭರತ ಕೂಡ ಮೊದಲ ಯತ್ನದಲ್ಲಿ ವಿಜಯಪತಾಕೆ ಹಾರಿಸುವಲ್ಲಿ ವಿಫಲರಾಗಿದ್ದಾರೆ. 1994ರಲ್ಲಿ ಹುಬ್ಬಳ್ಳಿ ಗ್ರಾಮೀಣದಲ್ಲಿ ಕಣಕ್ಕಿಳಿದು ಬಸವರಾಜ ಬೊಮ್ಮಾಯಿ ಮೊದಲ ಬಾರಿ ಕಣಕ್ಕಿಳಿದು ಜಗದೀಶ ಶೆಟ್ಟರ್ ವಿರುದ್ಧ 15,954ಮತಗಳ ಸೋಲು ಅನುಭವಿಸಿದ್ದರು. ಮತ್ತೆ ಮೂವತ್ತು ವರ್ಷಗಳ ನಂತರ ಇತಿಹಾಸ ಪುನರಾವರ್ತನೆಯಾಗಿದೆ. ಮಗ ಭರತ ಬೊಮ್ಮಾಯಿ ಅಪ್ಪನಂತೆ ಮಾಜಿ ಸಿಎಂ ಪುತ್ರ ಹಣೆ ಪಟ್ಟಿ ಹಚ್ಚಿಕೊಂಡಿದ್ದರೂ ಯಾಸಿರ ಪಠಾಣ ವಿರುದ್ಧ 13,488 ಮತಗಳ ಪರಾಭವ ಅನುಭವಿಸಿದ್ದಾರೆ. ಆರನೆ ಸುತ್ತಿನವರೆಗೆ ಕಮಲ ಅಭ್ಯರ್ಥಿ ಮುನ್ನಡೆಯಲ್ಲಿದ್ದರೂ ನಂತರದ ಸುತ್ತುಗಳಲ್ಲಿ ಕೈ ಹುರಿಯಾಳು ಲೀಡ್ ಹೆಚ್ಚಿಸಿಕೊಳ್ಳುತ್ತಲೇ ಹೋದರು.
*ಮತ್ತಷ್ಟು ಚುನಾವಣಾ ವಿಶೇಷ*
1) *ತೀವ್ರ ಕುತೂಹಲ ಕೆರಳಿಸಿದ್ದ ಮಹಾರಾಷ್ಟ್ರದಲ್ಲಿ ಮಹಾಯುತಿ ( ಎನ್ ಡಿಎ ) 230 ಸ್ಥಾನ ಗಳಿಸಿ ವಿರೋಧಿ ಮಹಾ ವಿಕಾಸ ಅಘಾಡಿ (47) ಹೇಳ ಹೆಸರಿಲ್ಲದಂತೆ ಮಾಡಿ ಮತ್ತೆ ಅಧಿಕಾರದ ಗದ್ದುಗೆ ಏರಲು ಸಿದ್ದತೆ ನಡೆಸಿದೆ. ಕಾಂಗ್ರೆಸ್, ಉದ್ಧವ ಠಾಕ್ರೆ ಮತ್ತು ಶರದ ಪವಾರ ಬಣಗಳಿಗೆ ಭಾರಿ ಹಿನ್ನೆಡೆಯಾಗಿದೆ.*
2) *ಜಾರ್ಖಂಡ್ ರಾಜ್ಯದಲ್ಲಿ ಇಂಡಿಯಾ ಬ್ಲಾಕ್ ಕಮಾಲ್ ಮಾಡಿದ್ದು ಎಲ್ಲ ನಿರೀಕ್ಷೆ ಹುಸಿ ಮಾಡಿ 57ಸ್ಥಾನ ಗಳಿಸಿ ಎನ್ ಡಿಎ(23) ಲೆಕ್ಕಕ್ಕೆ ಇಲ್ಲ ಎಂಬಂತೆ ಮಾಡಿದೆ.*
3) *ಕೇರಳದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ನಾಲ್ಕು ಲಕ್ಷಕ್ಕೂ ಹೆಚ್ಚು ಅಂತರದ ಗೆಲುವಿನೊಂದಿಗೆ ಅಣ್ಣ ರಾಹುಲ್ ದಾಖಲೆಯನ್ನೂ ಹಿಮ್ಮೆಟ್ಟಿಸಿ ಸಂಸತ್ತಿಗೆ ಬಲಗಾಲಿಡಲಿದ್ದಾಳೆ.*
4) *ಪಶ್ಚಿಮ ಬಂಗಾಲದ ಉಪ ಸಮರದಲ್ಲಿ ತೃಣ ಮೂಲ ಕಾಂಗ್ರೆಸ್ 6 ಸ್ಥಾನಗಳನ್ನೂ ಕೈ ವಶ ಮಾಡಿಕೊಂಡಿದ್ದು, ಉ.ಪ್ರದಲ್ಲಿ ಬಿಜೆಪಿ 7ಮತ್ತು ಎಸ್ ಪಿ 2ರಲ್ಲಿ ಗೆಲುವು ಸಾಧಿಸಿದೆ. ಗುಜರಾತ್ನ ವಾವ್ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಯ ತೀವ್ರ ಪೈಪೋಟಿ ಮಧ್ಯೆ ಬಿಜೆಪಿ ಹುರಿಯಾಳು ಸ್ವರೂಪ ಠಾಕೂರ್ 2353ಗಳ ಗೆಲುವು ದಾಖಲಿಸಿದ್ದಾರೆ.*