*ಬೋಗಸ್ ಬಿಲ್ ಅಲ್ಲದೇ ನಂಬರ್ ಪ್ಲೇಟ ಸಹ ನಕಲಿ – ಚಾಲಕ ಪರಾರಿ*
ಹುಬ್ಬಳ್ಳಿ : ತೈಲ ಸಾಗಾಟದ ಟ್ಯಾಂಕರ್ನಲ್ಲಿ ಸಾಗಿಸುತ್ತಿದ್ದ ಸುಮಾರು ಐವತ್ತು ಲಕ್ಷ ರೂ ಮೌಲ್ಯದ ಅಕ್ರಮ ಮದ್ಯವನ್ನು
ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆ ಜಾಗೃತದಳ ಇಂದು (ಜ.16) ವಶಪಡಿಸಿಕೊಂಡಿದೆ.
ಧಾರವಾಡ ನರೇಂದ್ರ ಟೋಲ್ ಬಳಿ ಆಯಿಲ್ ಟ್ಯಾಂಕರ್ನಲ್ಲಿ ಕಚ್ಚಾ ತೈಲದ ಹೆಸರಲ್ಲಿ ನಕಲಿ ಮದ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಬಿಲ್ ಸಹ ನಕಲಿ ಎನ್ನಲಾಗಿದೆ.
ಬೆಂಗಳೂರಿನ ಸೋಮಾನಿ ಟ್ರೇಡರ್ಸ ಹೆಸರಲ್ಲಿ ನಕಲಿ ಬಿಲ್ ಇದ್ದು,ರಾಜಸ್ಥಾನದ (Rajastan)ಉದಯಪುರದ ನಿಶಾಂತ ಲುಬ್ರಿಕಂಟ್ಸ್ ಗೆ ಸಾಗಾಟ ಹೆಸರಲ್ಲಿ ಬಿಲ್ ಮಾಡಲಾಗಿದೆ. ಅಲ್ಲದೇ ಟ್ಯಾಂಕರ್ ನಂಬರ್ ಪ್ಲೇಟ್ ಕೂಡಾ ನಕಲಿ ಎಂಬುದು ಖಚಿತಪಟ್ಟಿದ್ದು, ಎನ್ ಎಲ್ 01 ಎಲ್ 6136ನಂಬರ್ ಪ್ಲೇಟ್ ಬಳಸಿ ಸಾಗಾಟ ಮಾಡುತ್ತಿದ್ದರು. ರಾಯಲ್ ಬ್ಲ್ಯೂ ಹೆಸರಿನ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯದ ಬಾಟಲ್ಗಳು ಪತ್ತೆಯಾಗಿವೆ.
ಧಾರವಾಡದ ನರೇಂದ್ರ ಟೋಲ್ ಬಳಿ ಜಪ್ತಿ ಮಾಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಟ್ಯಾಂಕರ್ ಪರಿಶೀಲನೆ ಮಾಡುವ ವೇಳೆ ಚಾಲಕ ಮೋಹನ್ ಲಾಲ ಎಂಬಾತ ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿದ್ದು, ಈತ ರಾಜಸ್ತಾನದ ಮೂಲದವನೆನ್ನಲಾಗಿದೆ.
ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ವಿಜಯ ಕುಮಾರ್ ಸನದಿ, ಉಪ ಆಯುಕ್ತ ಬಾಳಪ್ಪ ಸಂಪಗಾಂವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು,ಅಬಕಾರಿ ಇಲಾಖೆಗೆ ಪ್ರಕರಣ ಹಸ್ತಾಂತರ ಮಾಡಲಿದ್ದಾರೆ.
ಇತ್ತೀಚೆಗೆ ತೆರೆಕಂಡು ಗಲ್ಲಾಪೆಟ್ಟಿಗೆ ದೋಚಿದ್ದ ಪುಷ್ಪ ಚಿತ್ರದಲ್ಲಿ ತೈಲ ಟ್ಯಾಂಕರ್ನಲ್ಲಿ ಗಂಧದ ಕಟ್ಟಿಗೆ ಕಳ್ಳ ಸಾಗಣೆ ಮಾಡುವ ರೀತಿಯಲ್ಲೇ ಇವರು ಮದ್ಯ ಸಾಗಿಸುತ್ತಿದ್ದು ಹಿಂದೆ ಹಲವಾರು ಬಾರಿ ಈ ರೀತಿ ಮಾಡಿದ್ದರೂ ಇಂದು ಅವರ ನಸೀಬು ಕೈ ಕೊಟ್ಟಿದೆ.