Ganapathi Gangolli
Editor and Owner,
Kannada Dhwani,
Kannada Dhwani – H No156, VSR Nagar, Prane Tempullit Shaneshwar, Bhairidevarakoppa, Hubli, Dharwad, 580025, Karnataka State.
Mob: +91 92432 82325
E-mail: [email protected]
ಸಕಾರಾತ್ಮಕ ಸುದ್ದಿಗಳ ಸದಾಶಯದ ’ಕನ್ನಡ ಧ್ವನಿ’
ಕಳೆದ ಮೂರುವರೆ ದಶಕಗಳಿಂದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಗ್ರಾಮೀಣ ಪತ್ರಿಕೋದ್ಯಮಕ್ಕೆ ಒತ್ತು ನೀಡುತ್ತ, ಅಲ್ಲದೇ ವಸ್ತುನಿಷ್ಠ ವರದಿ, ನೈಜ ಮತ್ತು ಅಪರಾಧ ಸುದ್ದಿಗಳಿಗೊಂದು ಹೊಸ ರೂಪ ನೀಡಿ ಧಾರವಾಡ ಜಿಲ್ಲೆಯಲ್ಲಿ ತನ್ನದೇ ಛಾಪು ಮೂಡಿಸಿ ಶೋಷಿತರ, ಹಿಂದುಳಿದವರ,ನೊಂದವರ ಪಾಲಿನ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ.
1990ರಿಂದ ಸುಮಾರು 10 ವರ್ಷಗಳ ಕಾಲ ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ ಹಾಗೂ ಕನ್ನಡಮ್ಮ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಗಣಪತಿ ಗಂಗೊಳ್ಳಿಯವರು 1999ರಲ್ಲಿ ಬಿತ್ತಿದ ಬೀಜ ’ಸಂಜೆ ದರ್ಪಣ’ ಇಂದು ಹೆಮ್ಮರಗಳ ಮಧ್ಯೆಯೆ ಬೆಳೆದು ಅವಿಭಾಜ್ಯ ಧಾರವಾಡ ಜಿಲ್ಲೆಯ ಜನ ಮನದ ಧ್ವನಿಯಾಗಿ ಹೊರಹೊಮ್ಮಿದೆ. ಹಲವು ಏಳು ಬೀಳುಗಳ ನಡುವೆಯೂ ಪ್ರಾಮಾಣಿಕ ಪತ್ರಿಕೋದ್ಯಮದ ಪ್ರತಿನಿಧಿಯಾಗಿ ಅವರು ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕಾ ರಂಗದಲ್ಲಿದ್ದರೂ ವೃತ್ತಿ ಜೀವನದಲ್ಲಿ ಸಣ್ಣ ಕಪ್ಪು ಚುಕ್ಕೆಯನ್ನೂ ಅಂಟಿಸಿಕೊಳ್ಳದೇ ವಸ್ತುನಿಷ್ಠ ವರದಿಗಾರಿಕೆಯ ಮೂಲಕ ಸಾಮಾಜಿಕ ಕಾಳಜಿಯೊಂದಿಗೆ ಕಾರ್ಯ ನಿರ್ವಹಿಸುತ್ತಾ , ನಿಖರ ವರದಿಗಳ ಮೂಲಕ ಪತ್ರಿಕಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಇವರ ಗರಡಿಯಲ್ಲಿ ತಯಾರಾದ ಐವತ್ತಕ್ಕೂ ಹೆಚ್ಚು ಪತ್ರಕರ್ತರು ಇಂದು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡು ಅವಧಿ ಮಾದರಿ ಎಂಬಂತೆ ಕಾರ್ಯನಿರ್ವಹಿಸಿ, ಸಂಘದ ಆರ್ಥಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರಲ್ಲದೇ ಎಲ್ಲ ಮಾಧ್ಯಮದವರನ್ನೂ ಒಗ್ಗೂಡಿಸಿ ಎಲ್ಲರನ್ನೂ ನಮ್ಮವರೆಂಬ ಭಾವನೆಯಿಂದ ಕಾರ್ಯನಿರ್ವಹಿಸಿದವರು. ಪ್ರಸಕ್ತ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ( ಕೆಯುಡಬ್ಲುಜೆ ) ರಾಜ್ಯ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1996ರಲ್ಲಿ ಗರುಡನಗಿರಿ ನಾಗರಾಜ್ ಅಧ್ಯಕ್ಷರಾಗಿದ್ದ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅನುಲಕ್ಷಿಸಿ 2017ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿಗೂ ಭಾಜನನಾಗಿದ್ದು,ಪಾಲಿಕೆ ಧೀಮಂತ ನಾಗರಿಕ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ ಮುಂತಾದವುಗಳು ಬಂದಿವೆ. ಹಿರಿಯ ಸಾಹಿತಿ ಡಾ. ಸಂಗಮೇಶ ಸಾಹಿತ್ಯ ಪ್ರತಿಷ್ಠಾನದ ಗೌರವ ಅಧ್ಯಕ್ಷರಾಗಿ ಅಲ್ಲದೇ ವಿವಿಧ ಸಾಹಿತ್ಯಕ, ಸಂಗೀತ, ಕಲೆ ಮುಂತಾದ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಸಕ್ತ ಸಾಮಾಜಿಕ ಜಾಲತಾಣ, ನ್ಯೂಸ ಪೋರ್ಟಲ್ಗಳ ಭರಾಟೆಯಲ್ಲಿ ಸಕಾರಾತ್ಮಕ ಸುದ್ದಿಗಳನ್ನು ಮಾತ್ರ ಓದುಗರಿಗೆ ನೀಡಬೇಕೆಂಬ ಹಂಬಲದೊಂದಿಗೆ ಸದ್ದಿಲ್ಲದ ಸಾಧಕರನ್ನು ಪರಿಚಯಿಸುತ್ತಾ ’ಕನ್ನಡ ಧ್ವನಿ’ ಸಹ ಮುನ್ನಡೆಯುತ್ತಿದೆ.