*ಪಿಂಚಣಿ ಹಣಕ್ಕೆ ಲಂಚದ ಬೇಡಿಕೆಯಿಟ್ಟ ವಿದ್ಯಾ ಮೇಡಂಗೆ ’ಪಾಠ’ ಕಲಿಸಿದ ನಿವೃತ್ತ ಶಿಕ್ಷಕ / 8 ಸಾವಿರ ಮಾಮೂಲಿ ಪಡೆಯುವಾಗಲೇ ವಶಕ್ಕೆ*
ಹುಬ್ಬಳ್ಳಿ : ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿಗೆ ಸಂಬಂಧಿಸಿದಂತೆ ಕುಂದಗೋಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ( BEO ) ಎಂಟು ಸಾವಿರ ಲಂಚ ಪಡೆಯುವಾಗ ಇಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ನಿವೃತ್ತ ಶಿಕ್ಷಕ ಮಂಜುನಾಥ ಕುರುವಿನಶೆಟ್ಟಿ ಎಂಬುವವರ ಪಿಂಚಣಿ ಹಾಗೂ ಗಳಿಕೆಯ ರಜೆ, ಗುಂಪು ವಿಮೆಗೆ ಸಂಬಂದಪಟ್ಟಂತೆ ಕಾಗದ ಪತ್ರಗಳಿಗೆ ಸಹಿ ಹಾಕಲು ಬಿಇಒ ವಿದ್ಯಾ ಕುಂದರಗಿ 10ಸಾವಿರ ರೂ ’ಮಾಮೂಲಿ’ ಬೇಡಿಕೆ ಇಟ್ಟಿದ್ದರು. ಕೊನೆಗೆ 8ಸಾವಿರ ನೀಡಲು ಒಪ್ಪಿ ತಮಗೆ ಸತಾಯಿಸಿದ ಬಿಇಒಗೆ ಅಬಕಡ ’ಪಾಠ’ ಕಲಿಸಲು ಮುಂದಾದ ನಿವೃತ್ತ ಶಿಕ್ಷಕರು ದಿ. 30ರಂದು ಲೋಕಾಯುಕ್ತಕ್ಕೂ ದೂರು ನೀಡಿದ್ದರು.
ಲೋಕಾಯುಕ್ತ ಎಸ್ ಪಿ ಸತೀಶ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ ಪಿ ಶಂಕರ ರಾಗಿ, ಇನ್ಸಪೆಕ್ಟರ್ ಬಸವರಾಜ ಮುಕರ್ತಿಹಾಳ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12-30ರ ಸುಮಾರಿಗೆ ನಿವೃತ್ತ ಶಿಕ್ಷಕರಿಂದ ಎಂಟು ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿ ಹಣ ವಶಪಡಿಸಿಕೊಂಡಿದ್ದು, ನಂತರ ಸಂಜೆವರೆಗೆ ಇಲಾಖೆಯ ಕಡತಗಳನ್ನು ಪರಿಶೀಲಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಕುಂದಗೋಳ ಬಿಇಒ ಕಚೇರಿಗೆ ಲೋಕಾ ಅಧಿಕಾರಿಗಳ ಸೂಚನೆ ಮೇರೆಗೆ ಬಂದಿದ್ದರು. ತಾಲೂಕಿನ ಮಳಲಿ ಗ್ರಾಮದ ಹೈಸ್ಕೂಲ್ ಶಿಕ್ಷಕ ಸಂಜೀವಕುಮಾರ ಬೆಳವಟಗಿ ಅವರನ್ನು ಪ್ರಭಾರ ಬಿಇಒ ಆಗಿ ನೇಮಕ ಮಾಡಲಾಗಿದೆ ಎಂದರಲ್ಲದೇ ಹೆಚ್ಚೇನು ಹೇಳಲು ನಿರಾಕರಿಸಿದರು.