*ಅಜಾತ ಶತ್ರುಗೆ 16ರಂದು ಅರ್ಥಪೂರ್ಣ ಅಭಿನಂದನೆ*
ಧಾರವಾಡ :ಪೇಡೆನಗರಿಯ ಸಾಂಸ್ಕೃತಿಕ ಸಿರಿ, ಉದ್ಯಮಿ, ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಸಮಾಜ ಮುಖಿಯಾಗಿ ಮುನ್ನಡೆದ ರಾಜಕಾರಣಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಜಾತ ಶತ್ರು ಪದಕ್ಕೆ ಪರ್ಯಾಯ ಎಂಬಂತಿರುವ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು 85ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅವರನ್ನು ಅರ್ಥಪೂರ್ಣವಾಗಿ ದಿ. 16ರಂದು ಸಾರ್ವಜನಿಕವಾಗಿ ಅಭಿನಂದಿಸಲು ಸಿದ್ದತೆಗಳು ನಡೆದಿವೆ.
ನಗರದ ಹೊರವಲಯದಲ್ಲಿನ ಅಂಬರೈ ಹೊಟೆಲ್ನಲ್ಲಿ ಶನಿವಾರ ಸಂಜೆ ಐದು ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಠಾಧೀಶರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಹಿತ ಗಣ್ಯರ ದಂಡೆ ಹರಿದು ಬರಲಿದೆ.
ಸರಳ, ಸಜ್ಜನ ಸ್ವಭಾವದ ಮತ್ತು ಶರಣ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಬೆಲ್ಲದ ಅವರು ಬರೀ ರಾಜಕಾರಣಿ ಮಾತ್ರವಲ್ಲದೇ ಎಲ್ಲರೊಳಗೊಂದಾಗಿ ಹೆಜ್ಜೆ ಹಾಕಿದವರಾಗಿದ್ದು ಎಲ್ಲ ರಂಗದಲ್ಲೂ ಆದರ್ಶಪ್ರಾಯರಾಗಿ ಮುಂದಿನ ತಲೆಮಾರಿಗೆ ಆದರ್ಶದ ಮುನ್ನುಡಿ ಬರೆಯುವ ವ್ಯಕ್ತಿತ್ವ ಹೊಂದಿದವರು. ಸ್ವತಂತ್ರ ಶಾಸಕರಾಗಿ ರಾಜಕೀಯಕ್ಕೆ ಬಂದ ಅವರು ತದನಂತರ ನಂತರ ಮೂರು ಬಾರಿ ಶಾಸಕರಾಗಿ, ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಕ್ರೀಯ ರಾಜಕಾರಾಣದಿಂದ ರಾಜಕೀಯ ನಿವೃತ್ತಿ ಪಡೆದವರು.ಪಾಪು ನಂತರ ವಿದ್ಯಾವರ್ಧಕ ಸಂಘದ ಚುಕ್ಕಾಣಿ ಹಿಡಿದವರು.
ಚಂದ್ರಕಾಂತ ಬೆಲ್ಲದ ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅವರು ಇಂದು ಈ ಸಂಭ್ರಮದ ವಿವರ ನೀಡಿದರು.
ಡಂಬಳ-ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು, ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮಿಗಳ ಸಾನಿಧ್ಯದಲ್ಲಿ ಜರುಗುವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.
ಬೆಲ್ಲದ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ’ಬೆಲ್ಲದಚ್ಚು’ ಅಭಿನಂದನಾ ಗ್ರಂಥವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ’ ದೊಡ್ಡ ಹೊಳೆ ದಾಟಿದವರು’ ಆತ್ಮಕಥನವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡುವರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಸಚಿವ ಸಂತೋಷ ಲಾಡ್ ಉಪಸ್ಥಿತರಿರುವರು ಎಂದರು.
ಸಾಹಿತಿ ಗೋ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ.ಶಂಭು ಬಳಿಗಾರ ಅಭಿನಂದನಾ ನುಡಿಗಳನ್ನಾಡುವರು ಎಂದರು. ಈ ಭವ್ಯ ಸಮಾರಂಭದಲ್ಲಿ ಅನೇಕರ ಸಾಧಕರ ಸನ್ಮಾನ ನಡೆಯಲಿದೆ.
ಕ.ವಿ.ವ. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರಾಚಾರ್ಯ ಶಶಿಧರ ತೋಡಕರ, ಪರಿಸರವಾದಿ ಶಂಕರ ಕುಂಬಿ ಸುದ್ದಿಗೋಷ್ಠಿಯಲ್ಲಿದ್ದರು.