ಹುಬ್ಬಳ್ಳಿ: 2022ರ ಎಪ್ರಿಲ್ 17ರಂದು ನಡೆದ ಹಳೇಹುಬ್ಬಳ್ಳಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಜೈಲಿನಲ್ಲಿದ್ದ FC 158 ಜನರ ಪೈಕಿ ಮತ್ತೆ 37 ಜನರಿಗೆ ಇಂದು (ದಿ.15) ಸುಪ್ರೀಂಕೋರ್ಟನಿಂದ ಜಾಮೀನು ದೊರೆತಿದೆ.
ಇಂದು ಸುಪ್ರೀಂಕೋರ್ಟನ ಹಾಲ್ ನಂ ಮೂರರಲ್ಲಿ ಪ್ರಕರಣದ ವಿಚಾರಣೆ ನಡೆದು 37 ಜನರಿಗೆ ಜಾಮೀನು ದೊರೆತಿದೆ.
ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಅಧ್ಯಕ್ಷ ಮಹ್ಮದಯೂಸೂಫ್ ಸವಣೂರ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿದ್ದು ಅಲ್ಲಿಂದಲೇ ದೂರವಾಣಿ ಮೂಲಕ 37 ಜನರಿಗೆ ( 35ಮತ್ತು 2) ಜಾಮೀನು ದೊರೆತಿರುವುದನ್ನು ಖಚಿತ ಪಡಿಸಿದ್ದಾರೆ.
ಬಂಧಿತರ ಪರವಾಗಿ ಬೆಂಗಳೂರಿನ ವಕೀಲರಾದ ಕೊತವಾಲ್ ಮತ್ತಿತರರು ವಾದ ಮಂಡಿಸಿದ್ದರು.
ಪ್ರವಾದಿ ಮೊಹಮ್ಮದ ಪೈಗಂಬರರ ಬಗೆಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ 2022ರ ಎ.17ರಂದು ಗಲಾಟೆ, ಕಲ್ಲು ತೂರಾಟ ನಡೆದಿತ್ತಲ್ಲದೇ ಪೊಲೀಸ್ ವಾಹನ ಜಖಂಗೊಳಿಸಲಾಗಿತ್ತಲ್ಲದೇ ಸ್ವತಃ ಅಂದಿನ ಆಯುಕ್ತ ಲಾಬೂರಾಂ ಮೂರು ದಿನಗಳ ಕಾಲ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆ ಪ್ರಕರಣದಲ್ಲಿ 158 ಜನರ ಮೇಲೆ ದೇಶದ್ರೋಹದ ಕೇಸ ಹಾಕಿ ಜೈಲಿಗೆ ಹಾಕಲಾಗಿತ್ತು.
ಕಳೆದ ಅಕ್ಟೋಬರ್ 17ರಂದು ಸರ್ವೋಚ್ಛ ನ್ಯಾಯಾಲಯ ನಾಲತವಾಡ ಮತ್ತು ಸಿಕಂದರ ಎಂಬುವವರಿಗೆ ಜಾಮೀನು ಮಂಜೂರು ಮಾಡಿತ್ತು. ಇದಕ್ಕೂ ಮೊದಲೂ ಜಿಲ್ಲಾ ನ್ಯಾಯಾಲಯದಲ್ಲಿ 8 ಜನರಿಗೆ ಜಾಮೀನು ದೊರೆತಿತ್ತು.ಇದುವರೆಗೆ ಒಟ್ಟು 47ಜನರಿಗೆ ಜಾಮೀನು ಸಿಕ್ಕಂತಾಗಿದೆ.
ಅಂಜುಮನ್ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಪ್ರಮುಖರು ಬಂಧನದಲ್ಲಿರುವವರಿಗೆ ಜಾಮೀನು ನೀಡಿಸಲು ವ್ಯಾಪಕ ಯತ್ನ ನಡೆಸಿದ್ದರು.