*ಹುಬ್ಬಳ್ಳಿ ಬಹುತೇಕ ಕೇಸರಿಮಯ /ನಗರಾದ್ಯಂತ ಪ್ರಸಾದ ವಿತರಣೆ/ ಬಿಗಿ ಪೊಲೀಸ್ ಭದ್ರತೆ*
ಹುಬ್ಬಳ್ಳಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ
ವಾಣಿಜ್ಯ ರಾಜಧಾನಿ ಹಿರಿಮೆಯ
ಬಹುತೇಕ ಕೇಸರಿಮಯವಾಗಿದ್ದು ರಾಮನಾಮದಲ್ಲಿ ಮಿಂದೆದ್ದಿದೆ.
ನಗರದ ಪ್ರಮುಖ ವೃತ್ತ ಸೇರಿದಂತೆ ಗಲ್ಲಿಗಲ್ಲಿಯೂ ಕೇಸರಿ ಬಾವುಟಗಳಿಂದ ಕಂಗೊಳಿಸುತ್ತಿದೆ.
ನಗರದ ದೇವಸ್ಥಾನಗಳು, ಮಠ-ಮಂದಿರಗಳು ರಾಮಧ್ವಜ, ಕೇಸರಿ ಬಾವುಟ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು ಬೆಳಿಗ್ಗೆಯಿಂದಲೇ ಪೂಜೆ, ಭಜನೆಗಳು ನಡೆಯುತ್ತಿದ್ದು ದೀಪೋತ್ಸವದ ಸಂಭ್ರಮ ಮನೆಮಾಡಿದೆ.
ಬಹುತೇಕ ಗುಡಿ, ಮಂದಿರಗಳನ್ನು ಸಹ ತಳಿರು-ತೋರಣಗಳಿಂದ ಸಿಂಗರಿಸಲ್ಪಟ್ಟಿದ್ದು,ವಿವಿಧ ಸಂಘ- ಸಂಸ್ಥೆಗಳು ಬಡಾವಣೆಗಳಲ್ಲೂ ರಾಮೋತ್ಸವ ಆಚರಿಸುತ್ತಿವೆ.
ದುರ್ಗದಬೈಲ್, ಗಣೇಶಪೇಟೆ, ತುಳಜಾಭವಾನಿ ವೃತ್ತ, ಮೇದಾರ ಓಣಿ, ಗೋಪನಕೊಪ್ಪ ವೃತ್ತ, ದೇವಾಂಗಪೇಟೆ, ಮರಾಠಗಲ್ಲಿ, ವಿಜಯನಗರ, ಗೋಕುಲ ರಸ್ತೆ, ಕೇಶ್ವಾಪುರ ವೃತ್ತಗಳಂತೂ ಅಕ್ಷರಶಃ ಕೇಸರಿಮಯವಾಗಿದೆ. ನಗರದ ಪ್ರಮುಖ ಪ್ರದೇಶ ಹಾಗೂ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿತ್ತು.
ಡಾ. ಕಂಠಪಲ್ಲೀ ಸಮೀರಾಚಾರ್ಯರ ನೇತೃತ್ವದಲ್ಲಿ
ವಿಶ್ವಹಿಂದೂ ಪರಿಷತ್ ಹಾಗೂ ವಿಜಯನಗರ ಕೋ ಆಪರೇಟಿವ್ ಸೊಸಾಯಿಟಿ, ವೇದಪೀಠ, ವಿಜಯಾಂಜನೇಯ ವೇದ ಸಂಸ್ಕೃತ ವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ವಿಜಯನಗರ ಮಾರುತಿ ದೇವಾಲಯದಲ್ಲಿ ಲಕ್ಷ ತುಳಸಿ ಅರ್ಚನೆ ಮಾಡಿ ಶ್ರೀರಾಮ ದೀಪಾವಳಿ ಮಹೋತ್ಸವ ಆಚರಿಸಲಾಯಿತು.ಕಾರ್ಪೊರೇಟರ್ ಸಂತೋಷ ಚವ್ಹಾಣ ದಂಪತಿಗಳು ಸಂಕಲ್ಪವನ್ನು ನೆರವೇರಿಸಿದರು.
ಇಡೀ ನಗರಾದ್ಯಂತ ವಿವಿಧ ಬಡಾವಣೆಗಳಲ್ಲಿ, ದೇವಸ್ಥಾನಗಳಲ್ಲಿ ಶ್ರೀರಾಮಪ್ರಸಾದ ವಿತರಿಸಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಶ್ರೀ ಸಿದ್ಧಾರೂಢ ಮಠ ಸೇರಿದಂತೆ ವಿವಿಧ ಕಡೆ, ಶಾಸಕ ಮಹೇಶ್ ಟೆಂಗಿನಕಾಯಿ ಇತರ ಮುಖಂಡರು ಅನೇಕ ರಾಮೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.