*ಸತತ ಎರಡನೇ ದಿನವೂ ಪರಿಶೀಲನೆ/ ದಾಖಲೆ ಜಾಲಾಡುತ್ತಿರುವ ಐವತ್ತಕ್ಕೂ ಹೆಚ್ಚು ಅಧಿಕಾರಿಗಳು*
ಹುಬ್ಬಳ್ಳಿ: ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ದಾವಣಗೆರೆ, ಹೊಸಪೇಟೆ ಮುಂತಾದೆಡೆ ಆಭರಣ ಮಳಿಗೆ, ಹೊಟೆಲ್ ಅಲ್ಲದೇ ಜವಳೀ ಅಂಗಡಿ ಹೊಂದಿರುವ ನಗರದ ಉದ್ಯಮಿ ಗಣೇಶ ಶೇಟ್ ಅವರ ನಿವಾಸ ಸೇರಿದಂತೆ ವಿವಿಧ ಅಂಗಡಿಗಳ ಮೇಲೆ ಆದಾಯಕರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಸತತ ಎರಡನೇ ದಿನವೂ ತಪಾಸಣೆ ಮುಂದುವರಿದಿದ್ದು ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಶೇಟ್ ಅವರಿಗೆ ಸೇರಿದ ಅಶೋಕ ನಗರದ ನಿವಾಸ, ಸ್ಟೇಶನ್ ರಸ್ತೆಯಲ್ಲಿರುವ ಕೆಜಿಪಿ ಜ್ಯುವೆಲರಿ, ಪ್ರಧಾನ ಅಂಚೆ ಕಚೇರಿ ಬಳಿಯ ಮಹಾದೇವಿ ಸಿಲ್ಕ್ ಜವಳಿ ಅಂಗಡಿ, ಗೋಕುಲ ರಸ್ತೆಯ ತಾರಾ ಎಮರಾಲ್ಡ ಹೊಟೆಲ್,ದಾಜೀಬಾನಪೇಟೆಯ ಕುಬೇರ ಶೋರೂಮ್ ಹಾಗೂ ಅಮರಗೋಳದಲ್ಲಿರುವ ಪ್ರತಿಷ್ಠಿತ ರಾಯಲ್ ರಿಟ್ಜ್ ಹೋಟೆಲ್ ಮೇಲೆ ಬೆಂಗಳೂರಿನ 50 ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಮಂಗಳವಾರ ಆರಂಭವಾದ ತಪಾಸಣೆ ಇಂದು ಪೂರ್ಣ ದಿನ ರಾತ್ರಿಯವರೆಗೂ ನಡೆದಿದ್ದು ನಾಳೆಯೂ ಮುಂದುವರಿಯಬಹುದೆಂದು ಹೇಳಲಾಗಿದೆ.
ಹುಬ್ಬಳ್ಳಿಯ ಆಶೋಕ ನಗರದಲ್ಲಿರುವ ಗಣೇಶ ಸೇಟ್ ನಿವಾಸದಲ್ಲಿ 20 ಗಂಟೆಗಳಿಂದ ಶೋಧ ಕಾರ್ಯ ಮುಂದುವರೆದಿದ್ದು ಅನೇಕ ಮಹತ್ವದ ದಾಖಲೆಗಳು, ವಿವರಗಳು ಐಟಿ ಅಧಿಕಾರಿಗಳಿಗೆ ದೊರೆತಿದೆ ಎನ್ನಲಾಗಿದೆ.
ಸ್ಟೇಶನ್ ರಸ್ತೆಯಲ್ಲಿರುವ ಕೆಜಿಪಿ ಜ್ಯುವಲರ್ಸ್ನಲ್ಲಿ ಉದ್ಯಮಿ ಶೇಟ್ ಪುತ್ರ ಶ್ರೀಗಂಧ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಇವರದೇ ಒಡೆತನದ ಹೊಸಪೇಟೆಯಲ್ಲಿರುವ ತಾರಾ ಪ್ಯಾಲೇಸ್ ಮೇಲೂ ದಾಳಿ ನಡೆದಿದೆಯೆಂದು ತಿಳಿದುಬಂದಿದೆ.
ಇವರ ಜ್ಯುವೆಲರಿ ಹಾಗೂ ಹೊಟೆಲ್ಗಳಲ್ಲಿ ಗದಗಿನ ಮಾಜಿ ಉಸ್ತುವಾರಿ ಸಚಿವರೊಬ್ಬರ ಪಾಲುದಾರಿಕೆ ಇದೆ ಎನ್ನಲಾಗಿದ್ದು ಅವರು ಇಂದು ಹುಬ್ಬಳ್ಳಿಗೆ ಭೇಟಿ ನೀಡಿರುವುದು ಹಲವು ಗುಸು ಗುಸುಗಳಿಗೆ ಕಾರಣವಾಗಿದೆ. ಅಲ್ಲದೇ ಹಿಂದೂ ಫೈರ್ ಬ್ರ್ಯಾಂಡ್ ಒಬ್ಬರ ಹೂಡಿಕೆ ಇದೆ ಎಂಬ ಮಾತೂ ಕೇಳಿ ಬರುತ್ತಿವೆ. ಅಲ್ಲದೇ ರಾಯಲ್ ರಿಟ್ಜ್ ಹೊಟೆಲ್ ಕಾಲೇಜು ಹುಡುಗ ಹುಡುಗಿಯರ , ಯುವಕ,ಯುವತಿಯರ ಹಾಟ್ ಸ್ಪಾಟ್ ಆಗಿದ್ದು ಪ್ರತಿ ಶನಿವಾರ ಇಲ್ಲಿನ ಕಪಲ್ ಎಂಟ್ರಿ ಡಿಜೆಗೆ ಭಾರಿ ಡಿಮಾಂಡ್ ಇದ್ದು ಪೊಲೀಸ ಆಯುಕ್ತರ ಕಚೇರಿಯಿಂದ ಕೂಗಳತೆ ದೂರದಲ್ಲಿದ್ದರೂ ಮದ್ಯರಾತ್ರಿ ಒಂದರವರೆಗೆ ನಡೆಯುತ್ತದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.