*ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಬ್ಬಯ್ಯ ಅಧಿಕಾರ ಸ್ವೀಕಾರ*/
*ಫೆ.24ರಂದು 36 ಸಾವಿರ ಮನೆ ಲೋಕಾರ್ಪಣೆ: ಸಚಿವ ಜಮೀರ್*
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರಕ್ಕೆ ಅಭಿವೃದ್ಧಿಯ ಪ್ರಸಾದ ನೀಡುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಸರ್ವ ಸಮುದಾಯದ ಹಿತ ಚಿಂತಕ ಪ್ರಸಾದ ಅಬ್ಬಯ್ಯ ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಧ್ಯಾಹ್ನ ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ನಡೆದ ಪ್ರಸಾದ ಅಬ್ಬಯ್ಯ ಅವರ ಅಭಿನಂದನಾ ಸಮಾರಂಭಯಲ್ಲಿ ವಸತಿ ಸಚಿವ ಜಮೀರ ಅಹ್ಮದ ಖಾನ್ ಪಾಲ್ಗೊಂಡು ಮಾತನಾಡಿ ಅಭಿವೃದ್ಧಿಗೆ ಇನ್ನೊಂದು ಹೆಸರೇ ಪ್ರಸಾದ ಅಬ್ಬಯ್ಯ. ಅವರಂತ ಜನಪರ ಕೆಲಸ ಮಾಡಬೇಕೆಂಬ ಕಾಳಜಿ ಉಳ್ಳ ಧುರೀಣರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಅತ್ಯಂತ ಸಂತಸದ ಸಂಗತಿಯಾಗಿದ್ದು, ಫೆ.24ರಂದು ರಂದು ರಾಜ್ಯದಾದ್ಯಂತ ಒಟ್ಟು 36ಸಾವಿರ ಮನೆಗಳನ್ನು ನೂತನ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರೊಂದಿಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ 2800 ಸ್ಲಮ್ಗಳಿವೆ. ಸ್ಲಮ್ಗಳಲ್ಲಿ ಶೇ.೯೦ರಷ್ಟು ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರೇ ವಾಸವಿದ್ದು, 2013-2018ರ ವರೆಗಿನ ಸಿಎಂ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 150ಕೋಟಿ ರೂ.ಗಳ ವಿಶೇಷ ಅನುದಾನ ನೀಡಿತ್ತು. ಅದರಂತೆ 5ಲಕ್ಷ ಆಶ್ರಯ ಮನೆಗಳ ನಿರ್ಮಾಣಕ್ಕೆ ನಾಂದಿ ಹಾಡಿ ದೊಡ್ಡಕ್ರಾಂತಿ ಮಾಡಿತ್ತು. ಆದರೆ, ನಂತರ ಬಂದ ಬಿಜೆಪಿ ಸರ್ಕಾರ ಒಂದೇ ಒಂದು ಮನೆ ನಿರ್ಮಾಣ ಮಾಡಿಲ್ಲ. ಒಂದು ರೂ. ಅನುದಾನ ಕೂಡ ನೀಡಿಲ್ಲ ಎಂದ ಅವರು, ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ಮನೆಗಳ ನಿರ್ಮಾಣಕ್ಕೆ ಮತ್ತೆ 500ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಸ್ಲಮ್ ಬೋರ್ಡ್ ಅಧ್ಯಕ್ಷರಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಸಾದ ಅಬ್ಬಯ್ಯ ಅವರು, ದೀನ ದಲಿತರ ಸಬಲೀಕರಣ, ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಅದೆ ನಿಟ್ಟಿನಲ್ಲಿ ಇಡೀ ರಾಜ್ಯದ ಸ್ಲಮ್ಗಳಿಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ರಾಜ್ಯವನ್ನು ಕೊಳಗೇರಿ ಮುಕ್ತ ರಾಜ್ಯವನ್ನಾಗಿ ನಿರ್ಮಾಣ ಮಾಡುವ ಪಣತೊಟ್ಟಿದ್ದೇನೆ. ಮೇರು ವ್ಯಕ್ತಿತ್ವ ಹೊಂದಿರುವ ಅಣ್ಣನ ಸ್ಥಾನದಲ್ಲಿ ನಿಂತಿರುವ ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಸೇರಿಕೊಂಡು ರಾಜ್ಯದ ಎಲ್ಲ ಸ್ಲಮ್ಗಳಿಗೂ ಹೈಟೆಕ್ ಸ್ಪರ್ಶ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನಾನು ಮೂರುಬಾರಿ ಶಾಸಕನಾಗಿ, ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷನಾಗಿ ಜನರ ಸೇವೆ ಮಾಡಲು ಮೂಲ ಕಾರಣವೇ ಡಾ.ಬಾಬಾ ಸಾಹೇಬರು ನೀಡಿದ ಸಂವಿಧಾನವಾಗಿದೆ. ಜಾತಿ, ಮತ, ವರ್ಣ ಭೇದವಿಲ್ಲದೇ ಪಾರದರ್ಶಕ ಮತ್ತು ಸಕಾರಾತ್ಮಕ ಆಡಳಿತ ನೀಡುವ ಏಕಮಾತ್ರ ವ್ಯಕ್ತಿತ್ವ ಎಂದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು. ಇಂದು ಸ್ಲಮ್ ಎಂಬ ಪದವನ್ನು ತೆಗೆದು ಮೂಲ ನಿವಾಸಿಗಳು ಎಂದು ಕರೆಯಬೇಕೆನ್ನುವ ಬೇಡಿಕೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಬೋಸರಾಜು, ಪ್ರೊ. ಸದಾಶಿವ ಮರ್ಜಿ, ಡಾ. ಸುಭಾಷ ನಾಟೇಕರ್, ಸುರೇಶ ತಳವಾರ, ಮಹಾವೀರ ಮೋಹಿತೆ, ಮಲ್ಲಿಕಾರ್ಜುನ ರಾಜಸಿಂಗೆ, ಲಕ್ಷ್ಮಿ ದೊಡ್ಡಬಳ್ಳಾಪುರ, ಪರಮೇಶ್ವ ಕಾಳೆ, ಬಸವರಾಜ ಕಡೆಮನಿ ಸೇರಿದಂತೆ ಮೊದಲಾದ ಗಣ್ಯರು ಇದ್ದರು.
ಬೆಳಿಗ್ಗೆ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕುಟುಂಬಸ್ಥರು, ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಅಬ್ಬಯ್ಯ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ ಮಾನೆ, ಡಿಸಿಸಿ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಮುಖಂಡರಾದ ಅನ್ವರ ಮುಧೋಳ, ರಾಜಶೇಖರ ಮೆಣಸಿನಕಾಯಿ,ಶಫಿ ಮುದ್ದೇಬಿಹಾಳ,ಅಲ್ತಾಫ್ ಕಿತ್ತೂರ ಸೇರಿದಂತೆ ಅನೇಕರು ಇದ್ದರು.