*ನೂತನ ಹುಡಾ ಅಧ್ಯಕ್ಷ ಶಾಕೀರ ಸನದಿ ಖಡಕ್ ಎಚ್ಚರಿಕೆ*
ಹುಬ್ಬಳ್ಳಿ : ’ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ತಲೆ ಎತ್ತುತ್ತಿರುವ ಅಕ್ರಮ ವಸತಿ ವಿನ್ಯಾಸಗಳಿಗೆ ಪೂರ್ಣ ವಿರಾಮ ಹಾಕಲಾಗುವುದಲ್ಲದೇ ಬಿಲ್ಡರ್ಗಳು, ಡೆವಲಪರ್ಗಳು ಮುಗ್ದ ಜನರಿಗೆ ಮೋಸ ಮಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’
ಅನಧಿಕೃತ ಲೇ ಔಟ್ಗಳ ಹಾವಳಿ ಮಹಾನಗರದಲ್ಲಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಗತಿ ಪರ ಚಿಂತಕ, ಕಾಂಗ್ರೆಸ್ನ ಭರವಸೆಯ ಯುವ ನಾಯಕ ಎನ್ನಬಹುದಾದ ಶಾಕೀರ ಸನದಿ ಮೊದಲ ಪತ್ರಿಕಾಗೋಷ್ಠಿಯಲ್ಲಿ ಆಡಿದ ಖಡಕ್ ನುಡಿಗಳು.
ಮುಂಬರುವ ದಿನಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅವಳಿನಗರದ ಜನತೆಗೆ ಒಂದು ಸಾವಿರ ಸುಸಜ್ಜಿತ ನಿವೇಶನದ ಉತ್ತಮ ಲೇಔಟ್ಗಳನ್ನು ನಿರ್ಮಿಸುವ ಕನಸು ಹೊಂದಿದ್ದು ಆ ನಿಟ್ಟಿನಲ್ಲಿ ಪ್ರಯತ್ನಿಸುವೆ. ಜಾಗ, ನಿವೇಶನ ನೋಂದಣಿ ಹಾಗೂ ಯಾವುದೇ ತಾಂತ್ರಿಕ ಸಮಸ್ಯೆಗಳು ಸಂಭವಿಸದಂತೆ ಪ್ರಾಧಿಕಾರವುಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ಸರ್ಕಾರದ ಆರ್ಥಿಕತೆ ಹಾಗೂ ಪರಿಸರವನ್ನು ಗಮನದಲ್ಲಿಟ್ಟುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಹುಡಾದಿಂದ ನಿರ್ಮಾಣಗೊಂಡ ಅನೇಕ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆಗಳ ಸಮಸ್ಯೆ ನಿವಾರಿಸಲು ಅಲ್ಲದೇ ರಾಣಿ ಚೆನ್ನಮ್ಮ ನಗರ ನಿವೇಶನಗಳ ವಿತರಣೆಗೆ ಇರುವ ತೊಡಕು ನಿವಾರಿಸಿ ಹಂಚಿಕೆ ಮಾಡಲು ಯತ್ನಿಸಲಾಗುವುದು ಎಂದರು.
ಅವಳಿನಗರದ ವಸತಿ ವಿನ್ಯಾಸಗಳಲ್ಲಿ ಹಂಚಿಕೆಯಾಗದೇ ಉಳಿದಿರುವ ಖಾಲಿ ಮೂಲೆ ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದಲ್ಲದೇ
ವಿವಿಧ ವಸತಿ ವಿನ್ಯಾಸಗಳಲ್ಲಿ ನಾಗರಿಕ ಉದ್ದೇಶಕ್ಕೆ ಮೀಸಲಾಗಿರುವ ನಿವೇಶನಗಳನ್ನು ಹರಾಜು ಪ್ರಕ್ರಿಯೆ ಮಾಡಲಾಗುವುದು.ಅಲ್ಲದೇ ನಿವೇಶನ ರಹಿತರಿಗೆ ಸೂರು ನಿರ್ಮಿಸಿಕೊಡುವ ಭರವಸೆ ನೀಡುವುದಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಗೋಕುಲ ರಸ್ತೆಯ ಕಿರ್ಲೋಸ್ಕರ ಜಾಗೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಈ ಬಗ್ಗೆ ಕಾನೂನು ತಜ್ಞರು ಹಾಗೂ ಸರ್ಕಾರದ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
*ಸಂವಿಧಾನ ಪೀಠಿಕೆ ಓದಿ ಅಧಿಕಾರ* : ಶಾಕೀರ ಸನದಿ ಇಂದು ಸಂವಿಧಾನದ ಪೀಠಿಕೆ ಸಹಿ ಪುಸ್ತಕಕ್ಕೆ ರುಜು ಹಾಕುವ ಮೂಲಕ ಉಳಿದವರಿಗಿಂತ ಭಿನ್ನವಾಗಿ ಅಧಿಕಾರ ಸ್ವೀಕರಿಸಿದರಲ್ಲದೇ ತಾವು ಉಳಿದವರಿಗಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುವ ಮುನ್ಸೂಚನೆ ನೀಡಿದರು. ಇದಕ್ಕೂ ಮೊದಲು ಅವರು ಕಿಮ್ಸ್ ಆಸ್ಪತ್ರೆ ಎದುರಿನ ಮಹಾತ್ಮಾ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಅಧಿಕಾರ ಸ್ವೀಕಾರದ ವೇಳೆ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಉಭಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ,ಅಲ್ತಾಫ್ ಹಳ್ಳೂರ, ಶಾಕೀರ ತಂದೆ ಪ್ರೋ.ಐ.ಜಿ.ಸನದಿ ಅಲ್ಲದೇ ಕುಟುಂಬ ಸದಸ್ಯರು, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಹುಡಾ ಆಯುಕ್ತ ಸಂತೋಷ ಬಿರಾದಾರ ನೂರಾರು ಗಣ್ಯರು, ಕಾರ್ಯಕರ್ತರು ,ಅಭಿಮಾನಿಗಳು ಸಾಕ್ಷಿಯಾದರು.
*ಮನೆಯಲ್ಲೂ ಜೀವಕಳೆ* : ಇಂದಿಗೂ ಸರಳ, ಸಜ್ಜನಿಕೆಗೆ ಪರ್ಯಾಯದಂತಿರುವ ಮಾಜಿ ಸಂಸದ ಪ್ರೋ. ಐ.ಜಿ.ಸನದಿ ಕಳೆದ ಸುಮಾರು 20 ವರ್ಷಗಳಿಂದ ಅಧಿಕಾರದಲ್ಲಿ ಇಲ್ಲವಾದರೂ ಇಂದಿಗೂ ಅವರ ಆಪ್ತ ವಲಯ ಸದಾ ಅವರೊಂದಿಗಿದ್ದರೂ ಇದೀಗ ಮಗ ಶಾಕೀರ ಹುಡಾ ಅಧ್ಯಕ್ಷನಾದ ನಂತರ ಮತ್ತೆ ವಿಶ್ವೇಶ್ವರ ನಗರದ ಅವರ ಮನೆ ಕಾರ್ಯಕರ್ತರು, ಅಭಿಮಾನಿಗಳಿಂದ ಗಿಜಿ ಗುಡುತ್ತಿದೆ.ಅಲ್ಲದೇ ಪಕ್ಷದ ವಲಯದಲ್ಲೂ ಅವರ ನೇಮಕದ ಬಗ್ಗೆ ಒಳ್ಳೆಯ ಮಾತುಗಳಿದ್ದು ಅವಳಿನಗರಕ್ಕೆ ರಚನಾತ್ಮಕವಾಗಿ ಏನನ್ನಾದರೂ ಮಾಡಬೇಕೆಂಬ ಕಳಕಳಿ ಹೊಂದಿರುವ ಶಾಕೀರ ಆ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂಬುದು ’ಕನ್ನಡ ಧ್ವನಿ’ಯ ಹಾರೈಕೆ.