*ಆಸ್ತಿ ವಿಚಾರದಲ್ಲಿ ಸುಪಾರಿ ಸ್ಕೆಚ್ / ಮೂರೇ ದಿನದಲ್ಲಿ ಹೆಡೆಮುರಿ ಕಟ್ಟಿದ ಖಾಕಿ ಪಡೆ*
ಗದಗ: ಇಲ್ಲಿನ ದಾಸರ ಓಣಿ ನಿವಾಸಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತೀಕ ಸೇರಿದಂತೆ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಪ್ರಕರಣದಲ್ಲಿ ಗದಗ ಪೊಲೀಸರ ತಂಡ ಮೂರು ದಿನಗಳಲ್ಲೇ ಮೀರಜ್ ಮೂಲದ ಐವರು ಸೇರಿ ಒಟ್ಟು ಎಂಟು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
ಹತ್ಯೆಗೆ ಸುನಂದಾ ಪತಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರಕಾಶ್ ಬಾಕಳೆ ಮೊದಲ ಪತ್ನಿಯ ಮಗ ಅಲ್ಲದೆ ಅನೇಕ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ವಿನಾಯಕ ಬಾಕಳೆ ಆಸ್ತಿ , ಕೌಟುಂಬಿಕ ವಿಚಾರದಲ್ಲಿ ಸುಪಾರಿ ನೀಡಿದ್ದ ಎಂಬುದು ಬೆಳಕಿಗೆ ಬಂದಿದೆ.
ಗದಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ, ಪ್ರಕಾಶ ಬಾಕಳೆಯ 1ನೇ ಪತ್ನಿಯ ಪುತ್ರ ವಿನಾಯಕ ಪ್ರಕಾಶ ಬಾಕಳೆ(31), ಗದಗನರೇ ಆದ ಫೈರೋಜ್ ನಿಸಾರಹ್ಮದ ಖಾಜಿ(29) ಹಾಗೂ ಜಿಶಾನ್ ಮೆಹಬೂಬಲಿ ಖಾಜಿ(24) ಮೀರಜ್ ಮೂಲದ ಸಾಹಿಲ್ ಆಸ್ಪಾಕ್ ಖಾಜಿ(19), ಸೊಹೇಲ್ ಆಸ್ಪಾಕ್ ಖಾಜಿ(19), ಸುಲ್ತಾನ್ ಜಿಲಾನಿ ಶೇಖ್(23), ಮಹೇಶ ಜಗನ್ನಾಥ ಸಾಳೋಂಕೆ(21), ವಾಹಿದ ಆಯಾಕತ್ ಬೇಪಾರಿ(21), ಬಂಧಿಸಲ್ಪಟ್ಟವರಾಗಿದ್ದಾರೆ.
ತಂದೆ, ಮಲತಾಯಿ, ಮಲತಾಯಿಯ ಮಗನ ಕೊಲೆ ಮಾಡಲು ವಿನಾಯಕ ಬಾಕಳೆ 65 ಲಕ್ಷದ ಸುಪಾರಿ ನೀಡಿದ್ದು ಮುಂಗಡವಾಗಿ 2 ಲಕ್ಷ ನೀಡಿದ್ದ.
ಕಳೆದದಿ. 19ರಂದು ಬೆಳಗಿನ ಜಾವ ನಗರಸಭೆ ಉಪಾಧ್ಯಕ್ಷೆ ಕಿರಿಯ ಮಗ ಕಾರ್ತಿಕ್ ಬಾಕಳೆ (28), ಪ್ರಕಾಶ್ ಬಾಕಳೆ ಮೊದಲ ಪತ್ನಿ ಸಹೋದರ ಪರಶುರಾಮ ಹಾದಿಮನಿ (55),ಆಯನ ಪತ್ನಿ ಲಕ್ಷ್ಮೀ ಹಾದಿಮನಿ (45), ಪುತ್ರಿ ಆಕಾಂಕ್ಷಾ ಹಾದಿಮನಿ (16) ಕೊಲೆಯಾಗಿತ್ತು.
ಕುಟುಂಬವನ್ನೇ ಮುಗಿಸಲು ವಿನಾಯಕ್ ಬಾಕಳೆ ಫಯಾಜ್ ಆಂಡ್ ಗ್ಯಾಂಗ್ಗೆ ಸುಪಾರಿ ಕೊಟ್ಟಿದ್ದ . ಇಡೀ ಗದಗ ಬೆಟಗೇರಿ ನಗರವೇ ಬೆಚ್ಚಿ ಬಿದ್ದ ಘಟನೆ ನಂತರ ಕಾರ್ಯಾಚರಣೆಗಿಳಿದ ಖಾಕಿ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಕೃತ್ಯಕ್ಕೆ ಬಳಸಿದ್ದ ಆಲ್ಟೋ ಕಾರ್ನ್ನು ಜಪ್ತಿ ಮಾಡಿದೆ.
ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ ಕುಮಾರ್ ಪತ್ರಿಕಾಗೋಷ್ಠಿ ಯಲ್ಲಿ ಕೊಲೆಯ ಸಂಪೂರ್ಣ ವಿವರ ಬಿಚ್ಚಿಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸಹಿತ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗದಗ ಡಿ ಎಸ್ ಪಿ ಜಿ.ಎಚ್.ಇನಾಮದಾರ. ನರಗುಂದ ಡಿಎಸ್ ಪಿ ಪ್ರಭುಗೌಡ ಕಿರದಳ್ಳಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಡಿಜಿ, ಎಡಿಜಿಪಿ ಪ್ರಕರಣದ ತನಿಖೆಗೆ ಮೆಚ್ಚುಗೆ ವ್ಯಕ್ತಪಡಿಸಿ 5 ಲಕ್ಷ ಬಹುಮಾನ ಘೋಷಿಸಿದ್ದಾರೆ.