*ಶೆಟ್ಟರ್ ಗೆ ಕುಂದಾ,ಕರದಂಟು ಡಬಲ್ ಧಮಾಕಾ / ಬೊಮ್ಮಾಯಿಗೆ ಗೆಲುವಿನ ಏಲಕ್ಕಿ ಹಾರ*
ಹುಬ್ಬಳ್ಳಿ : ಧಾರವಾಡ ಕ್ಷೇತ್ರಕ್ಕೆ ಹೊಂದಿಕೊಂಡೇ ಇರುವ ಬೆಳಗಾವಿ ಮತ್ತು ಹಾವೇರಿ- ಗದಗ ಕ್ಷೇತ್ರ ಸಹಜವಾಗೇ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆದಿತ್ತು. ಇಬ್ಬರೂ ಲೋಕ ಸಮರದ ಮೊದಲ ಯತ್ನದಲ್ಲೇ ಯಶಸ್ವಿಯಾಗಿ ದಿಲ್ಲಿ ಫ್ಲೈಟ್ ಹತ್ತಿದ್ದಾರೆ . ಇವರಿಬ್ಬರೂ ಹುಬ್ಬಳ್ಳಿ ಮೂಲದವರು ಅಷ್ಟೇ ಅಲ್ಲದೆ 1994ರಲ್ಲಿ ಚೊಚ್ಚಲ ಚುನಾವಣೆಯಲ್ಲಿ
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಪರಸ್ಪರ ಮುಖಾಮುಖಿಯಾದವರು ಎಂಬುದು ವಿಶೇಷ.
ಸರಳ ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮರಳಿ ಕೇಸರಿ ಗೂಡಿಗೆ ಬಂದ ನಂತರ ತೀವ್ರ ಪ್ರಯಾಸ ಪಟ್ಟು ಬೆಳಗಾವಿ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮಗ ಮೃಣಾಲ ಹೆಬ್ಬಾಳ್ಕರ ಎದುರು
ಸುಮಾರು ಒಂದೂವರೆ ಲಕ್ಷ ಅಂತರದ ಗೆಲುವು ಕಂಡಿದ್ದಾರೆ. ಬೀಗತ್ತಿ ಮಂಗಳಾ ಅಂಗಡಿ ಸ್ಥಾನದಲ್ಲಿ ಕಣಕ್ಕಿಳಿದ ಶೆಟ್ಟರ್ ಪರವಾದ ವಾತಾವರಣ ಅಂತಿಮ ಹಂತದಲ್ಲಿ ಸೃಷ್ಟಿಯಾಗಿತ್ತಾದರೂ ಜಯ ಸಾಧಿಸಿದ್ದಾರೆ. ಗೋಕಾಕ ಸಾಹುಕಾರರ ಬಲವೂ ಶೆಟ್ಟರ್ಗೆ ಗೆಲುವಿನ ಸಿಂಚನ ನೀಡಿದೆ .
ಇನ್ನೊಂದೆಡೆ ಹಾವೇರಿಯಲ್ಲಿ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆಲುವಿನ ಯಾಲಕ್ಕಿ ಹಾರ ಧರಿಸಿದ್ದಾರೆ. ಕಾಂಗ್ರೆಸ್ ಹುರಿಯಾಳು ಆನಂದ ಗಡ್ಡದೇವರಮಠ ವಿರುದ್ಧ 41998 ಅಂತರದ ಗೆಲುವು ದಾಖಲಿಸಿ ಚುನಾವಣಾ ತಂತ್ರಗಾರಿಕೆಗೆ ತನಗೆ ಸಾಟಿಯಿಲ್ಲ ಎಂಬುದನ್ನು ತೋರಿಸಿದ್ದಾರೆ.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ ತಂತ್ರಗಾರಿಕೆ ಅಲ್ಲದೇ ಹಾವೇರಿ ಜಿಲ್ಲೆಯ ಎಲ್ಲ ಕ್ಷೇತ್ರದ ಶಾಸಕರು ಕೈ ಪಡೆಯವರೇ ಇದ್ದರೂ ಬೊಮ್ಮಾಯಿ ಲೀಲಾಜಾಲವಾಗಿ ಗೆಲುವು ಸಾಧಿಸಿ ರಾಜ್ಯ ರಾಜಕೀಯದ ಇನ್ನಿಂಗ್ಸ್ಗೆ ಬಹುತೇಕ ಪೂರ್ಣವಿರಾಮ ಹಾಕಿದಂತಾಗಿದೆ. ಹಾವೇರಿ ಜಿಲ್ಲೆಯಲ್ಲಿ ಎಲ್ಲೆಡೆ ಬೊಮ್ಮಾಯಿಗೆ ದೊಡ್ಡ ಅಂತರದ ಲೀಡ್ ದೊರೆತರೆ ಗಡ್ಡದೇವರಮಠ ಗದಗ ಜಿಲ್ಲೆಯ ರೋಣ, ಶಿರಹಟ್ಟಿ ಹೆಚ್ಚು ಮುನ್ನಡೆ ಸಾಧಿಸಿದರು. ಆದರೆ ಗೆಲುವಿನ ಅಂತರ ನೋಡಿದಾಗ ಕಾಂಗ್ರೆಸ್ ವೋಟ್ ಬ್ಯಾಂಕ್ ಇನ್ನೂ ಭದ್ರವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.