*ಜೋಶಿಯವರೊಂದಿಗೆ ಉತ್ತಮ ಸಂಬಂಧ ಇದೆ: ಬೊಮ್ಮಾಯಿ*
ಬೆಂಗಳೂರು :ಶಿಗ್ಗಾವಿ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತದೆ. ಅಲ್ಲಿ ನಮ್ಮ ಕುಟುಂಬದವರು ಅಭ್ಯರ್ಥಿಯಾಗಬೇಕೆಂದು ನಾವು ಬೇಡಿಕೆ ಇಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನು ಮಾಜಿ ಆಗಿರುವುದರಿಂದ ನನ್ನ ಮಗ ಭರತ್ ಹೆಸರು ಕೇಳಿ ಬರುತ್ತಿದೆ. ನಾವು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಅಲ್ಲಿ ಪಕ್ಷ ಸಮೀಕ್ಷೆ ಮಾಡಿ ಯಾರು ಗೆಲ್ಲುತ್ತಾರೆ ಅನ್ನುವುದನ್ನು ಪಕ್ಷ ಟಿಕೆಟ್ ನೀಡಲಿ. ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡುತ್ತೇವೆ ಎಂದರು.
ಅಲ್ಲದೇ ಆ ಕ್ಷೇತ್ರದಲ್ಲಿ ಯಾರೇ ಶಾಸಕರಾದರೂ, ಯಾರೇ ಮಂತ್ರಿ ಆದರೂ ಆ ಕ್ಷೇತ್ರದ ಜನತೆಯ ಜೊತೆಗೆ ಅವಿನಾಭಾವ ಸಂಬಂಧ ಇದೆ. ನಾನು ಆ ಕ್ಷೇತ್ರದ ಪ್ರತಿ ಮನೆಯ ಅಣ್ಣ, ತಮ್ಮ, ಮಗ ಆಗಿದ್ದೇನೆ. ಹೀಗಾಗಿ ಆ ಕ್ಷೇತ್ರದ ಜೊತೆಗೆ ಯಾವಾಗಲೂ ಇರುತ್ತೇನೆ ಎಂದು ಹೇಳಿದರು.
ಮೋದಿಯವರ ನೂತನ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ದೇಶ ಮಟ್ಟದಲ್ಲಿ ಯೋಚನೆ ಮಾಡುತ್ತದೆ. ಇಡೀ ದೇಶವನ್ನು ಗಮನ ಕೊಡುತ್ತದೆ. ಉತ್ತರ ಕರ್ನಾಟಕದ ಸಮಸ್ಯೆ ಬಂದಾಗ ನಮ್ಮ ಪಕ್ಷ ಪ್ರಭಲವಾಗಿ ಕೆಲಸ ಮಾಡುತ್ತದೆ. ಪ್ರಲ್ಹಾದ್ ಜೋಷಿಯವರು ಸಂಪುಟ ಸಚಿವರಾಗಿದ್ದಾರೆ. ಉತ್ತರ ಕರ್ನಾಟಕ ಭಾಗವನ್ನು ಪ್ರತಿನಿಧಿಸುತ್ತಾರೆ. ಅವರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರಲ್ಹಾದ್ ಜೋಷಿಯವರು ಬಂದಾಗ ಬಸವರಾಜ ಬೊಮ್ಮಾಯಿಯವರು ಬಾಗಿಲು ತೆಗೆಯಲಿಲ್ಲ ಎಂದು ಕೆಲವು ವಾಹಿನಿಯಲ್ಲಿ ಸುದ್ದಿ ಪ್ರಸಾರವಾಯಿತು. ಆದರೆ, ಜೋಷಿಯವರು ಬಂದಾಗ ನಾನು ಆಗ ರೂಮಿನಲ್ಲಿ ಇರಲಿಲ್ಲ. ಇದು ತಪ್ಪು ಸಂದೇಶ ಹೋಗಬಾರದು. ನಾನು ಅವರ ಒಳ್ಳೆಯ ಸ್ನೇಹಿತರು. ಅವರಿಗೆ ವಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಗ್ಯಾರೆಂಟಿ ಗಳಿಂದ ರಾಜಕೀಯ ಲಾಭವಾಗಿಲ್ಲ ಎನ್ನುವ ಚರ್ಚೆ ಆರಂಭವಾಗಿರುವುದನ್ನು ನೋಡಿದರೆ, ಕಾಂಗ್ರೆಸ್ ನವರು ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಗಳನ್ನು ಮಾಡಿದ್ದರು ಎಂದು ಅರ್ಥವಾಗುತ್ತದೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಇನ್ನು ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಅವರಿಗೆ ಕೊಟ್ಟಿರುವುದು ಅಚ್ಚರಿಯೇನಲ್ಲ. ಅವರು ಹೋರಾಟಗಾರರಿದ್ದಾರೆ. ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಹೋರಾಟ ಮಾಡಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಅಂತರದಿಂದ ಗೆದ್ದು ಬಂದಿದ್ದರು. ಅವರ ಅನುಭವಕ್ಕೆ ಅವಕಾಶ ದೊರೆತಿದೆ. ಅವರ ಅನುಭವ ಸೇವೆ ದೇಶಕ್ಕೆ ದೊರೆಯುತ್ತದೆ ಎಂದು ಹೇಳಿದರು.