*ಕಾಂಗ್ರೆಸ್ನಿಂದ ಯಲಿಗಾರ, ಮಂಗಳಮ್ಮ ಕಣಕ್ಕೆ*
ಹುಬ್ಬಳ್ಳಿ: ಯಾವುದೇ ಪವಾಡ ನಡೆಯದೇ ಹೋದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರದ ೨೩ನೇ ಮೇಯರ್ ಆಗಿ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯ ರಾಮಣ್ಣ ಬಡಿಗೇರ ಮತ್ತು ಉಪ ಮೇಯರ್ ಆಗಿ ಪೂರ್ವ ಕ್ಷೇತ್ರದ ಬಿಜವಾಡ ಕುಟುಂಬದ ಸೊಸೆ ದುರ್ಗಮ್ಮ ಅವರಿಗೆ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ನೂತನ ಮೇಯರ್, ಉಪಮೇಯರ್ ಚುನಾವಣೆ ನಾಳೆ ನಡೆಯಲಿದ್ದು, ಎರಡೂ ಸ್ಥಾನಗಳಿಗೂ ಪೈಪೋಟಿ ಮೇಲ್ನೋಟಕ್ಕೆ ಇದೆಯಾದರೂ ಕಮಲ ಪಾಳೆಯದಲ್ಲಿ ಈ ಇಬ್ಬರ ಆಯ್ಕೆ ಬಹುತೇಕ ನಿಕ್ಕಿ ಎಂಬ ಮಾತು ಕೇಳಿ ಬರುತ್ತಿವೆ.
ಮೇಯರ್ ಸ್ಥಾನಕ್ಕೆ 43ನೇ ವಾರ್ಡಿನ ಬೀರಪ್ಪ ಖಂಡೇಕರ ಮತ್ತು 37ನೇ ವಾರ್ಡಿನ ಸದಸ್ಯ ಉಮೇಶ ಕೌಜಗೇರಿ ಪೈಪೋಟಿ ನೀಡುತ್ತಿದ್ದರೂ ಹಿರಿತನಕ್ಕೆ ಮಣೆ ಹಾಕಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಸಂಜೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಕುರುಬ ಸಮುದಾಯದ ಮುಖಂಡರು ವಿಮಾನ ನಿಲ್ದಾಣದಲ್ಲೇ ಒತ್ತಡ ಹೇರಿದ್ದು ಅನೇಕ ಮಠಾಧೀಶರು, ರಾಜ್ಯದ ಪ್ರಭಾವಿಗಳ ಒತ್ತಡವೂ ಬೀರಪ್ಪ ಮಾಡುವಂತೆ ಹೇರಿದ್ದರೂ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಕಾದು ನೋಡಬೇಕಿದೆ.
ನಾಲ್ಕನೇ ಬಾರಿಗೆ ಪಾಲಿಕೆಗೆ ಬಲಗಾಲಿಟ್ಟಿರುವ ರಾಮಣ್ಣ ಬಡಿಗೇರ ಪರ ಅರವಿಂದ ಬೆಲ್ಲದ ಗಟ್ಟಿಯಾಗಿ ನಿಂತಿದ್ದು ಅಲ್ಲದೇ ಎರಡು ಬಾರಿ ಸ್ವಲ್ಪದರಿಂದ ಮೇಯರ್ ಗದ್ದಗೆಯಿಂದ ವಂಚಿತರಾಗಿದ್ದಾರೆಂಬ ಸಿಂಪಥಿ ಕೂಡ ಅವರ ಪರ ಇದೆ.
ಇನ್ನೊಂದೆಡೆ ಮಹಾನಗರ ಅಧ್ಯಕ್ಷ ಹುದ್ದೆಯಲ್ಲಿರುವ ತಿಪ್ಪಣ್ಣ ಮಜ್ಜಗಿ ಅರ್ಹ ಮೇಯರ್ ಸ್ಥಾನಕ್ಕೆ ಹೇಳಿ ಮಾಡಿಸಿದ ಅಭ್ಯರ್ಥಿಯಾಗಿದ್ದರು. ಆದರೆ ಈಗಾಗಲೇ ಮಹತ್ವದ ಹುದ್ದೆ ಇರುವುದು ಅವರ ಪರಿಗಣನೆ ಸಾಧ್ಯತೆ ಕಡಿಮೆ.
ರಾತ್ರಿ ಪಾಲಿಕೆ ಸದಸ್ಯರ ಸಭೆ ಗೋಕುಲ ರಸ್ತೆಯ ಹೊಟೆಲ್ ಅನಂತ ಗ್ರ್ಯಾಂಡ್ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನೇತೃತ್ವದಲ್ಲಿ ನಡೆವ ಸಭೆಯಲ್ಲಿ ಶಾಸಕರುಗಳಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ,ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ ಮುಂತಾದವರು ಪಾಲ್ಗೊಳ್ಳಲಿದ್ದಾರಲ್ಲದೇ ಎಲ್ಲ ಸದಸ್ಯರು ಇಂದೇ ಇಲ್ಲೇ ವಾಸ್ತವ್ಯ ಹೂಡಿ ನಾಳೆ ನಾಮಪತ್ರ ವೇಳೆಗೆ ಪಾಲಿಕೆ ಅಂಗಳಕ್ಕೆ ತೆರಳಲಿದ್ದಾರೆ. ಅಧಿಕೃತವಾಗಿ ಬೆಳಿಗ್ಗೆಯೇ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ.
ಉಪಮೇಯರ್ ಸ್ಥಾನಕ್ಕೆ ದುರ್ಗಮ್ಮಾ ಶಶಿಕಾಂತ ಬಿಜವಾಡ ಹಾಗೂ ಚಂದ್ರಿಕಾ ವೆಂಕಟೇಶ ಮೇಸ್ತ್ರಿ ಪೈಪೋಟಿಯಿದ್ದು ಮೊದಲ ಅವಧಿ ಮೇಯರ್ ಆಯ್ಕೆ ವೇಳೆ ಪಕ್ಷೇತರಳಾಗಿ ಗೆದ್ದು ಬಿಜೆಪಿ ಸೇರ್ಪಡೆ ವೇಳೆ ದುರ್ಗಮ್ಮ ಬಿಜವಾಡಗೆ ಉಪ ಮೇಯರ್ ಭರವಸೆ ನೀಡಿದ್ದು ಅದು ಅನುಷ್ಠಾನಗೊಳ್ಳಲಿದೆ ಎಂದು ಬಿಜೆಪಿ ಆಂತರಿಕ ವಲಯದಲ್ಲಿ ಕೇಳಿ ಬಂದಿದೆ.
ಕಾಂಗ್ರೆಸ್ನಿಂದ ಯಲಿಗಾರ : ಕಾಂಗ್ರೆಸ್ ಈ ಬಾರಿ ಜಿದ್ದಾ ಜಿದ್ದಿಗೆ ಬಿದ್ದಿಲ್ಲವಾಗಿದ್ದು ಮೇಯರ್ ಸ್ಥಾನಕ್ಕೆ ಇಮ್ರಾನ್ ಯಲಿಗಾರ ಮತ್ತು ಉಪಮೇಯರ್ ಸ್ಥಾನಕ್ಕೆ ಮಂಗಳಮ್ಮ ಹಿರೇಮನಿ ಅವರನ್ನು ಅಂತಿಮಗೊಳಿಸಲಾಗಿದೆ.
82ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಮಂದಿ ಪಕ್ಷೇತರ ಹಾಗೂ ಒಬ್ಬ ಜೆಡಿಎಸ್ ಸದಸ್ಯರಿದ್ದಾರೆ.ಅಲ್ಲದೇ ಎಂಟು ಜನಪ್ರತಿನಿಧಿಗಳ ಮತ ಸಹ ಇದೆ. ಸ್ಪಷ್ಪ ಬಹುಮತವಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ.