*ಐದನೇ ಬಾರಿಗೆ ಮುಗದ ಭರ್ಜರಿ ಜಯ/ ಕಲಘಟಗಿ ಪ್ರತಿಷ್ಠೆಯಾಗಿ ಗೆಲ್ಲಿಸಿದ ಛಬ್ಬಿ*
ಹುಬ್ಬಳ್ಳಿ : ಹಾವೇರಿ ಜಿಲ್ಲೆಯಿಂದ ಬೇರ್ಪಟ್ಟ ಬಳಿಕ ಮೊಟ್ಟ ಮೊದಲ ಬಾರಿಗೆ ನಡೆದ ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟ (ಕೆಎಂಎಎಫ್)ದ ಆಡಳಿತ ಮಂಡಳಿತ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಒಕ್ಕೂಟದ ಒಟ್ಟು 9 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ (ಗದಗ ಮತ್ತು ನರಗುಂದ ತಾಲೂಕಿನಿಂದ ಹನುಮಂತಗೌಡ ಹಿರೇಗೌಡರ) ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಉಳಿದ 8 ಸ್ಥಾನಗಳಿಗೆ ಇಂದು ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡಿದೆ.
ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಿಂದ ಶಂಕರ ಮುಗದ, ಗೀತಾ ಸುರೇಶ ಮರಲಿಂಗಣ್ಣವರ, ಸುರೇಶ ಸೋಮಪ್ಪ ಬಣವಿ, ಗದಗ ಜಿಲ್ಲೆಯಿಂದ ನೀಲಕಂಠ ಅಸೂಟಿ, ಲಿಂಗರಾಜಗೌಡ ಹನುಮಂತಗೌಡ ಪಾಟೀಲ, ಉತ್ತರ ಕನ್ನಡ ಜಿಲ್ಲೆಯಿಂದ ಸುರೇಶ್ಚಂದ್ರ ಹೆಗಡೆ, ಪರಶುರಾಮ ವೀರಭದ್ರ ನಾಯ್ಕ ಹಾಗೂ ಶಂಕರ ಪರಮೇಶ್ವರ ಹೆಗಡೆ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಧಾರವಾಡ, ಅಳ್ನಾವರ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ಮತಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ ಮಾಜಿ ಅಧ್ಯಕ್ಷ ಶಂಕರ ಮುಗದ (78 ಮತಗಳು) ಅವರು ಹೇಮರಡ್ಡಿ ನಾಗರಡ್ಡಿ ಲಿಂಗರಡ್ಡಿ (4) ವಿರುದ್ಧ 74 ಮತಗಳಿಂದ ಭರ್ಜರಿ ಜಯಗಳಿಸುವ ಮೂಲಕ 5ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಲಘಟಗಿ ತಾಲೂಕು ಮತಕ್ಷೇತ್ರದಿಂದ ಸ್ಪಧಿರ್ಸಿದ್ದ ಗೀತಾ ಸುರೇಶ ಮರಲಿಂಗಣ್ಣವರ (21) ಅವರು ಹನುಮಂತಪ್ಪ ಕೊರವರ (17) ಎದುರು 4 ಮತಗಳ ಅಂತರದಿಂದ ಜಯಗಳಿಸಿದ್ದಾರೆ . ಕಲಘಟಗಿ ಕ್ಷೇತ್ರವನ್ನು ಮಾಜಿ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಗೆಲುವು ತಂದಿದ್ದಾರೆ.
ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ತಾಲೂಕು ಮತಕ್ಷೇತ್ರದಿಂದ ಗಂಗಪ್ಪ ಮೂಕಪ್ಪ ಮೊರಬದ (31) ವಿರುದ್ಧ ಸುರೇಶ ಬಣವಿ (36) ಅವರು 5 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಗದಗ ಜಿಲ್ಲೆಯ ರೋಣ ಮತ್ತು ಗಜೇಂದ್ರಗಡ ತಾಲೂಕು ಮತಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ ನೀಲಕಂಠ ಅಸೂಟಿ (29) ಅವರು ಗದಿಗೆಪ್ಪ ಕಿರೇಸೂರ (13) ವಿರುದ್ಧ 16 ಮತಗಳ ಅಂತರದಲ್ಲಿ ಜಯಗಳಿಸಿದ್ದರೆ, ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಮತಕ್ಷೇತ್ರದಿಂದ ಲಿಂಗರಾಜಗೌಡ ಹನುಮಂತಗೌಡ ಪಾಟೀಲ (50) ಅವರು ಶೇಖಣ್ಣ ಕಾಳೆ (19) ವಿರುದ್ಧ 31 ಮತಗಳ ಅಂತರಿಂದ ಜಯಗಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಮತಕ್ಷೇತ್ರದಿಂದ ಸ್ಪಧಿರ್ಸಿದ್ದ ಸುರೇಶ್ಚಂದ್ರ ಹೆಗಡೆ (70) ಉಮಾಮಹೇಶ್ವರ ಕೇಶವ ಹೆಗಡೆ (14) ವಿರುದ್ಧ 56 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಮತಕ್ಷೇತ್ರದಿಂದ ಸ್ಪಧಿರ್ಸಿದ್ದ ಪರಶುರಾಮ ವೀರಭದ್ರ ನಾಯ್ಕ (37) ಅವರು ಸಾಧನಾ ರಾಜೇಶ ಭಟ್ಟ (27) ವಿರುದ್ಧ 10 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾಡ ತಾಲೂಕು ಮತಕ್ಷೇತ್ರದಿಂದ ಸ್ಪಧಿರ್ಸಿದ್ದ ಶಂಕರ ಪರಮೇಶ್ವರ ಹೆಗಡೆ (66) ಅವರು ಪ್ರಶಾಂತ ಸುಬ್ರಾಯ ಸಭಾಹಿತರ ವಿರುದ್ಧ 42 ಮತಗಳ ಅಂತರದಲ್ಲಿ ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಹಿರೇ ಗೌಡರ ಮತ್ತು ಅಸೂಟಿ ಹೊರತುಪಡಿಸಿ ಉಳಿದವರು ಕಮಲ ಬೆಂಬಲಿತರಾಗಿದ್ದಾರೆ.
ಮೊದಲ ಬಾರಿಗೆ ಈ ಚುನಾವಣೆಯಲ್ಲಿ ಮತದಾರರಿಗೆ ಉಭಯ ಪಕ್ಷಗಳ ಅಭ್ಯರ್ಥಿಗಳಿಂದಲೂ ಐದಂಕಿ ಸಂದಾಯವಾಗಿದೆ ಎಂಬ ಗುಸುಗುಸು ದಟ್ಟವಾಗಿದೆ.
ವರದಿ : ಸುಪ್ರಭಾತ ಹುಬ್ಬಳ್ಳಿ