*ನಾಳೆ , ನಾಡಿದ್ದು ಆರಾಧನಾ ಮಹೋತ್ಸವ – ಡಾ.ಸಿ.ಆರ್.ಚಂದ್ರಶೇಖರಗೆ ನಾಗಲಿಂಗಶ್ರೀ ಪ್ರಶಸ್ತಿ*
ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ರೈತ ಹೋರಾಟದ ಮೂಲಕ ಗುರುತಿಸಿಕೊಂಡಿರುವ ನವಲಗುಂದ ಪಟ್ಟಣದ ನಾಗಲಿಂಗ ಸ್ವಾಮಿ ಮಠ ಹಿಂದೂಗಳ ಮಠವಾದರೂ ಅಕ್ಷರಶಃ ಭಾವೈಕ್ಯತೆಯ ತಾಣ. ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ ಗದ್ದುಗೆ, ಕ್ರೆಸ್ತರ ಧರ್ಮಗ್ರಂಥ ಬೈಬಲ್ ಹಾಗೂ ಮುಸ್ಲಿಂ ಪಂಜಾಗಳು ದಿನನಿತ್ಯ ಪೂಜಿಸಲ್ಪಡುತ್ತವೆ.
ಅಜಾತ ನಾಗಲಿಂಗಜ್ಜನವರ ಪವಾಡ, ಲೀಲೆ ಶತಮಾನ ಕಳೆದರೂ ಭಕ್ತರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದು ಅವರು ಮಹಾತ್ಮರಾಗಿದ್ದಾರೆ.
ಆಂಗ್ಲರ ಆಡಳಿತದಲ್ಲಿ ತಮ್ಮ ಬೈಬಲ್ ಪ್ರಚಾರ ಮಾಡಲು ಮುಷ್ಟೀಗಿರಿ ಕಾಳಪ್ಪ ಎಂಬಾತನಿಗೆ ನೀಡಿದ್ದರು. ಗ್ರಾಮದೇವತೆ ಗುಡಿಯಲ್ಲಿ ಬೈಬಲ್ ಓದುತ್ತಿದ್ದಾಗ ನಾಗಲಿಂಗ ಸ್ವಾಮಿಗಳು ಆಗಮಿಸಿದ್ದನ್ನು ನೋಡಿ ಅವರು ಬೈಯ್ಯುತ್ತಾರೆಂದು ಬೈಬಲ್ನ್ನು ಮುಚ್ಚಿಟ್ಟಿದ್ದರು. ಬೈಬಲ್ನ್ನು ಅಜ್ಜನವರು ತರೆಸಿಕೊಂಡು ಅದಕ್ಕೆ ರಂದ್ರ ಹಾಕಿ ಆ ರಂದ್ರ ಮುಚ್ಚಿದಾಗ ಮತ್ತೆ ಆವತರಿಸಿ ಬರುವೆನೆಂದು ಹೇಳಿದ್ದಾರೆ. ಇವತ್ತಿಗೂ ಆ ಬೈಬಲ್ ಶ್ರೀ ಮಠದಲ್ಲಿ ಪೂಜೆಯಾಗುತ್ತದೆ. ಸಾರ್ವಜನಿಕರಿಗೆ ಬೈಬಲ್ ನೋಡಲು ಗದ್ದುಗೆ ಪೂಜೆಯ ಮೊದಲು ದೊರೆಯುವದು.
ಹುಬ್ಬಳ್ಳಿಯ ಸಿದ್ದಾರೂಢರು, ಹೊಸಳ್ಳಿ ಬೂದಿಸ್ವಾಮಿಗಳು, ಗರಗದ ಮಡಿವಾಳಜ್ಜನವರು, ಶಿಶುನಾಳ ಶರೀಪಸಾಹೇಬರು, ಮೊದಲಾದ ಶರಣರು ಹಾಗೂ ಸಂತ ಮಹಾಪುರಷರೂಡಗೂಡಿ ನಾಗಲಿಂಗಜ್ಜನವರು ಮಾಡಿದ ಪವಾಡಗಳನ್ನು ಇಲ್ಲಿನ ಹಿರಿಯರು ಇಂದಿಗೂ ನೆನೆಸಿಕೊಳ್ಳುವರಲ್ಲದೇ ಇಂಥ ಹಲವಾರು ಲೀಲೆಗಳನ್ನು ಮಾಡಿದ ಅಜ್ಜನವರು 1881 ರಲ್ಲಿ ಜೀವಂತ ಸಮಾಧಿ ಹೊಂದಿದ್ದಾರೆ.
ಪ್ರತಿವರ್ಷದಂತೆ ಈ ವರ್ಷದಂತೆ ಜು. 10 ರಂದು 143 ನೇ ಆರಾಧನಾ ಮಹೋತ್ಸವ ಹಾಗೂ ಮಜಾರ ಪೂಜೆ ನೆರವೇರಲಿದೆ. ಜು.11 ರಂದು ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.ನಾಳೆ
ಧಾರ್ಮಿಕ ಸಭೆಯಲ್ಲಿ ಖ್ಯಾತ ಮನೋವೈದ್ಯರು, ಪದ್ಮಶ್ರೀ ಪುರಸ್ಕ್ರತ ಡಾ. ಸಿ.ಆರ್.ಚಂದ್ರಶೇಖರ ಅವರಿಗೆ ’ಶ್ರೀ ನಾಗಲಿಂಗ ಶ್ರೀ’ ಪ್ರಶಸ್ತಿ ಪ್ರದಾನವೂ ನಡೆಯಲಿದೆ.
ಈ ಮಹಾಮಹಿಮನ ಆರಾಧನಾ ಮಹೋತ್ಸವ ಲಕ್ಷಾಂತರ ಜನರಿಗೆ ಭಕ್ತಿ ಶ್ರದ್ದೆಗಳ ಸಮ್ಮೇಳನವಾಗಿದೆ. ಶ್ರೀಗಳ ಸಂಕಲ್ಪದಂತೆ ಇಂದಿನ ಪೀಠಾಧಿಪತಿಯಾದ ವೀರಯ್ಯಾ ಸ್ವಾಮೀಜಿ ಮಠವನ್ನು ಧಾರ್ಮಿಕ ಕಾರ್ಯಕಲಾಪಗಳಿಗೆ ಸೀಮಿತಗೊಳಿಸದೇ ಶೈಕ್ಷಣಿಕ-ಸಾಂಸ್ಕ್ರತಿಕ-ಸಾಮಾಜಿಕವಾಗಿ ಬೆಳೆಸಿದ್ದಾರೆ.