*ಕೆಲ ಷರತ್ತುಗಳ ಹಾಕಿ ಮೂರು ದಿನಗಳ ಪ್ರತಿಷ್ಠಾಪನೆಗೆ ಒಪ್ಪಿಗೆ / ಈ ಬಾರಿಯೂ ಬಡಸ್ಕರ ಸಾರಥ್ಯದ ಸಮಿತಿಗೆ ಅನುಮತಿ*
ಹುಬ್ಬಳ್ಳಿ, 03: ಹುಬ್ಬಳ್ಳಿಯ ಹೃದಯಭಾಗದಲ್ಲಿ ಇರುವ ಚೆನ್ನಮ್ಮ ವರ್ತುಲದ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಇಂದು ಅಧಿಕೃತವಾಗಿ ಅನುಮತಿ ನೀಡಿದೆ.
ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾ ಮಂಡಳಿಗೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅನುಮತಿ ಪತ್ರ ನೀಡಿದ್ದು, ಮೂರು ದಿನಗಳ ಕಾಲ ಪಾಲಿಕೆ ಒಡೆತನದ (ಸಿಟಿಎಸ್ ನಂ.174) ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಕೆಲ ಷರತ್ತು ಹಾಕಲಾಗಿದೆ.
ಕಳೆದ ವರ್ಷ ಅನುಮತಿ ವಿಚಾರದಲ್ಲಿ ಭಾರೀ ಹಂಗಾಮಾ ನಡೆದಿತ್ತಲ್ಲದೆ ರಾಜ್ಯದಾದ್ಯಂತ ಸುದ್ದಿಯಾಗಿತ್ತು.
ಈ ವರ್ಷ ಪ್ರತಿಷ್ಠಾಪನೆಗೆ 4 ರಿಂದ 5 ಸಂಘಟನೆಗಳು ಅರ್ಜಿ ಸಲ್ಲಿಸಿದ್ದರೂ ಈಗಾಗಲೇ ಎರಡು ಅವಧಿ ಪ್ರತಿಷ್ಠಾಪಿಸಿರುವ ನ್ಯಾಯವಾದಿ ಸಂಜಯ ಬಡಸ್ಕರ ಅಧ್ಯಕ್ಷರಾಗಿರುವ ಮಹಾಮಂಡಳಕ್ಕೆ ಷರತ್ತು ವಿಧಿಸಿ ಅನುಮತಿ ನೀಡಿದೆ.
ದಿ.7ರಂದು ಗಣಪತಿ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದು 9ರಂದು ವಿಸರ್ಜನೆ ಮಾಡಲಾಗುತ್ತದೆ. ಕಳೆದ ಬಾರಿಯಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಈ ಬಾರಿ ಹುಬ್ಬಳ್ಳಿಯಲ್ಲಿಯೇ ವಿಗ್ರಹ ಪಪ್ಪುಲಾಲ ನಿರ್ಮಿಸಿದ್ದಾರೆ ಎಂದು ಅಧ್ಯಕ್ಷ ಬಡಸ್ಕರ ತಿಳಿಸಿದ್ದಾರೆ.
ಉಳಿದ ಎಲ್ಲಾ ಕಾರ್ಯಕ್ರಮಗಳ ವಿವರ, ಆಗಮಿಸುವ ಗಣ್ಯರ ವಿವರ ಇನ್ನೆರಡು ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿದರು.
ಇಂದು ಮಧ್ಯಾಹ್ನದೊಳಗೆ ಅನುಮತಿ ನೀಡುವಂತೆ ಬಿಜೆಪಿ, ಕೆಲ ಹಿಂದೂ ಸಂಘಟನೆಗಳು ಪಾಲಿಕೆಗೆ ಒತ್ತಾಯಿಸಿದ್ದವು.