ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ತೀವ್ರ ಕೂತೂಹಲ ಕೆರಳಿಸಿರುವ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಏಕಸದಸ್ಯ ಪೀಠ, ತೀರ್ಪು ಕಾಯ್ದಿರಿಸಲಾಗಿದೆ ಮತ್ತು ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಪ್ರಕಟಿಸಿದೆ.
ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಸರ್ಕಾರದ ಪರವಾಗಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದಾರೆ. ಇಂದು ಮುಖ್ಯಮಂತ್ರಿಗಳ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು.
ಇಂದು ವಾದ ಪೂರ್ಣಗೊಂಡು ಇಂದೇ ತೀರ್ಪು ಪ್ರಕಟಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಸಿಎಂ ಪರ ಅಭಿಷೇಕ ಸಿಂಘ್ವಿ ರಾಜ್ಯಪಾಲರು ಎರಡು ದಶಕಗಳಿಗೂ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ಇದು ರಾಷ್ಟ್ರಪತಿ ಆಳ್ವಿಕೆಗಿಂತ ಹೆಚ್ಚು ರಾಜಕೀಯಪ್ರೇರಿತ. ಸೆಕ್ಷೆನ್ 17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡುವ ಹೊಣೆ ರಾಜ್ಯಪಾಲರ ಮೇಲಿದೆ. ಎಲ್ಲಾ ಪ್ರಕರಣಗಳಲ್ಲೂ ಸಚಿವ ಸಂಪುಟ ಸಿಎಂ ಪರ ಇದೆ, ತಾರತಮ್ಯ ಮಾಡಿದೆ ಎನ್ನಲಾಗದು. ಸಚಿವ ಸಂಪುಟದ ಸಭೆಯಲ್ಲಿ ಮಂತ್ರಿಗಳು ಬೇರೆ ಬೇರೆ ಅಭಿಪ್ರಾಯ ಮಂಡಿಸಬಹುದು ಎಂದು ವಾದಿಸಿದರು.