*ಜಿಲ್ಲೆಯ 95 ಸಾವಿರ ಜನ ಭಾಗಿ*/ *ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಪ್ರಯತ್ನಕ್ಕೆ ಸಿಕ್ತು ದೊಡ್ಡ ಯಶಸ್ಸು /*ಪ್ರತಿಯೊಬ್ಬರೂ ದೇಶದ ಏಕತೆಯನ್ನು ಕಾಪಾಡಲಿ: ಲಾಡ್*
ಹುಬ್ಬಳ್ಳಿ : ಸಂವಿಧಾನ, ಪ್ರಜಾಪ್ರಭುತ್ವ, ಮಾನವ ಹಕ್ಕು, ಶಿಕ್ಷಣ ಕ್ಷೇತ್ರಗಳಲ್ಲಿ ಸದಾ ಕಾಲ ತನ್ನದೇ ಚಾಪು ಮೂಡಿಸುವ ಧಾರವಾಡ ಜಿಲ್ಲೆ ಇಂದಿನ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿಂದು ಅತಿ ಹೆಚ್ಚು ಜನರು ಭಾಗವಹಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನದ ದಾಖಲೆ ಬರೆದಿದೆ .
ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಸೇರಿ ಸುಮಾರು 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಅಭೂತ ಪೂರ್ವವಾಗಿ ಯಶಸ್ವಿಗೊಳ್ಳಿಸಿದ್ದಾರೆ.
ರಾಜ್ಯದ 31 ಜಿಲ್ಲೆಗಳಿಂದ ಒಟ್ಟು 25,35,223 ಜನರು ಪ್ರಜಾಪ್ರಭುತ್ವ ದಿನಾಚರಣೆಗೆ ಆನ್ಲೈನ್ ಮೂಲಕ ನೋಂದಾಯಿಸಿಕೊಂಡಿದ್ದು, ಈ ಪೈಕಿ ಧಾರವಾಡ ಜಿಲ್ಲೆಯಿಂದಲೇ ಸುಮಾರು 3,57,555 ಜನ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ರಾಜ್ಯ ಪ್ರಥಮರಾಗಿದ್ದಾರೆ.
ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಿಂದ 47.965 ಜನ ವೈಯಕ್ತಿಕವಾಗಿ, ಸುಮಾರು 1914 ಸರ್ಕಾರೇತ ಸಂಸ್ಥೆಗಳು ಮತ್ತು ಇತರ ಸಂಘಟನೆಗಳ 3,07,717 ವ್ಯಕ್ತಿಗಳು, ವಲಸಿಗರು ಸೇರಿ ವಿವಿಧ ರೀತಿಯ ಟ್ರಾವೆಲರ್ 129 ಕುಟುಂಬಗಳ 1,873 ಜನರು ರಾಜ್ಯ ಸರ್ಕಾರದ ಆನ್ಲೈನ್ www.democracyday.karnataka.in ಮೂಲಕ ರಾಜ್ಯದ ಇತರ ಜಿಲ್ಲೆಗಳಿಗಿಂತ ಅತಿ ಹೆಚ್ಚು 50,008 ಜನ ಪ್ರಜಾಪ್ರಭುತ್ವ ದಿನಾಚರಣೆ ಬೆಂಬಲಿಸಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮತ್ತು ಒಟ್ಟಾರೆಯಾಗಿ ಇಂದಿನ ಪ್ರಜಾಪ್ರಭುತ್ವ ಹಾಗೂ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಧಾರವಾಡ ಜಿಲ್ಲೆಯಿಂದ 3,57,555 ಜನರು ಭಾಗವಹಿಸಿದ್ದಾರೆ.ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಸೂಚಿಸಿದ ಜಿಲ್ಲೆಯ ಎಲ್ಲ ನಾಗರೀಕರಿಗೆ, ಸಂಘ ಸಂಸ್ಥೆಗಳಿಗೆ ಮತ್ತು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದ ಎಲ್ಲ ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಲಾಡ ಅವರು ಅಭಿನಂದಿಸಿದ್ದಾರೆ.
ಬೆಳಿಗ್ಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ, ಸಚಿವ ಸಂತೋಷ್ ಲಾಡ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ದೊರೆಯುವಂತೆ ಮಾಡಿದ್ದಾರೆ. ಪ್ರತಿಯೊಬ್ಬರೂ ದೇಶದ ಏಕತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಅತಿಹೆಚ್ಚು ನೋಂದಣಿ ಮಾಡಿದ್ದ ಧಾರವಾಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದ್ದರಿಂದ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಕೀರ್ ಸನದಿ, ಮಾಜಿ ಸಂಸದರಾದ ಐ.ಜಿ.ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರದ ಪೊಲೀಸ ಆಯುಕ್ತರಾದ ಎನ್ ಶಶಿಕುಮಾರ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಧಾರವಾಡ ಮೇಯರ್ ರಾಮಣ್ಣ ಬಡಿಗೇರ,ಪಾಲಿಕೆಯ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ,ಎಲ್. ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಡಿಡಿಪಿಐ ಎಸ್.ಎಸ್.ಕೆಳದಿಮಠ ಸೇರಿದಂತೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು.
*ಬೃಹತ್ ಸರಪಳಿ:* ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರನಿಂದ ಚಾಮರಾಜನಗರದ ವರೆಗೆ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಿರುವ ಅತಿ ಉದ್ದದ ಮಾನವ ಸರಪಳಿಯನ್ನು ಮಾಡಲಾಯಿತು ಜಿಲ್ಲೆಯ ಧಾರವಾಡ ತಾಲೂಕಿನ ತೇಗೂರದಿಂದ ಮಾವಿನಕೊಪ್ಪ ಗ್ರಾಮದ ವರಗೆ ಅಂದಾಜು 55 ಕಿ.ಮಿ ಉದ್ಧದ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು.
ಇದರಲ್ಲಿ ಪ್ರತಿ ಮೀಟರಗೆ ಒಬ್ಬರಂತೆ ಸುಮಾರು 60 ಸಾವಿರ ಜನ ಹಾಗೂ ರಾಷ್ಟ್ರೀಯ ಹೆದ್ದಾರಿ, ನಗರ ಪ್ರದೇಶದಲ್ಲಿ ಡಬಲ್ ಲೈನ್ ಮಾಡಲಾಗಿತ್ತು. ಇಂದಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅಂದಾಜು 95 ಸಾವಿರಕ್ಕೂ ಹೆಚ್ಚು ಜನ ಪ್ರತ್ಯಕ್ಷವಾಗಿ ಭಾಗವಿಸಿ ಯಶಸ್ವಿಗೊಳಿಸಿದರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ಮೈದಾನದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಬೃಹತ್ ಮಾನವ ಸರಪಳಿ ಮೂಲಕ ಭಾರತ ನಕ್ಷೆಯನ್ನು ರಚಿಸಿದರು. ಭಾರತದ ನಕ್ಷೆಯಲ್ಲಿ ಕರ್ನಾಟಕ ರಾಜ್ಯದ ಚಿತ್ರಣವನ್ನು ಸಹ ಮೂಡಿಸಿದರು. ಅಲ್ಲದೇ ಮೈದಾನದಲ್ಲಿ 1 ಕಿ.ಮೀ. ಉದ್ದದ ಕರ್ನಾಟಕ ಸಂಕೇತವಾಗಿ ಹಳದಿ ಮತ್ತು ಕೆಂಪು ಬಣ್ಣದ ಬೃಹತ್ ಬಾವುಟವನ್ನು ಪ್ರದರ್ಶನ ಮಾಡಲಾಯಿತು. ಮೈದಾನದ ತುಂಬ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಕ್ಯಾಪ್ಗಳನ್ನು ಧರಿಸಿ, ಏಕತೆ ಸಾರಿದರು.
ಉಪಹಾರ ವ್ಯವಸ್ಥೆ : ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಇಸ್ಕಾನ್ ಸಂಸ್ಥೆ ಮತ್ತು ಶ್ರೀ ಸಿದ್ಧಾರೂಢ ಮಠ ಟ್ರಸ್ಟದಿಂದ ಅಲ್ಪೋಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.ಇಲ್ಲಿನ ಜುಬ್ಲಿ ವೃತ್ತದಿಂದ ಕರ್ನಾಟಕ ಕಲಾ ಮಹಾವಿದ್ಯಾಲಯದ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ತಾಯಿ ಭುವನೇಶ್ವರಿ, ಕನಕದಾಸರು, ಭಗತ್ ಸಿಂಗ್ ಸೇರಿದಂತೆ ವಿವಿಧ ಮಹಾನ ಪುರುಷರ ವೇಷಭೂಷಣಗಳಲ್ಲಿ ಕಾಣಿಸಿಕೊಂಡು ಮೆರವಣಿಗೆಗೆ ಮೆರಗು ತಂದರು. ದೇಶದ 30 ರಾಜ್ಯಗಳಲ್ಲಿನ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳು ಮಿಂಚಿದ್ದರು. ಅಲ್ಲದೇ ಡೊಳ್ಳು ಕುಣಿತ, ಜಗ್ಗಲಗಿ, ಜಾಂಜ್ ಮೇಳ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಹಿಳೆಯರ ಕುಂಭಮೇಳ ಮೆರವಣಿಗೆಗೆ ಮತ್ತಷ್ಟು ಮೆರಗು ತಂದಿತ್ತು.
*ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಿ: ಸಿಎಂ*
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ಬೆಂಗಳೂರಿನಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಲ್ಲಿ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ನಮ್ಮ ಸಂವಿಧಾನ ಎತ್ತಿ ಹಿಡಿದಿರುವ ಬಹುತ್ವವನ್ನು ನಾವು ಬದುಕಿನಲ್ಲಿ ಆಚರಿಸೋಣ. ಆ ಮೂಲಕ ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸೋಣ ಎಂದರು.
ನಮ್ಮ ಬುದ್ದ, ಬಸವಣ್ಣನ ಕಾಲದಲ್ಲೇ ನಮ್ಮಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಕೇತ ಎಂದರು.
ನಮ್ಮ ರಾಷ್ಟ್ರಗೀತೆ ಮತ್ತು ನಮ್ಮ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು ಎಂದು ಕರೆ ನೀಡಿದರು.
ಈ ಬಿಜೆಪಿ ಮತ್ತು ಇವರ ಜೊತೆಗಿರುವ ವಿಚ್ಚಿದ್ರಕಾರಕ ಶಕ್ತಿಗಳು ಬಡವರ, ಮಧ್ಯಮ ವರ್ಗದ ವಿರೋಧಿಗಳು. ಇವರು ಬಡವರ ಪರವಾದ ಕಾರ್ಯಕ್ರಮಗಳು ಜಾರಿ ಆಗಲು ಬಿಡುವುದಿಲ್ಲ. ಆದ್ದರಿಂದ ಇವರನ್ನು ನಾವು ಸೋಲಿಸಬೇಕು ಎಂದರು.
20 ಲಕ್ಷಕ್ಕೂ ಹೆಚ್ಚು ಮಂದಿಯ ಮಾನವ ಸರಪಳಿ ರಚಿಸಿರುವುದೇ ದುಷ್ಟಶಕ್ತಿಗಳಿಗೆ ಎಚ್ಚರಿಕೆ ನೀಡಿ ಮನುಷ್ಯ ಸಮಾಜವನ್ನು ಬೆಸೆಯುವುದಾಗಿದೆ ಎಂದರು.
ಉದ್ಘಾಟನೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ದಿನದ ರಾಯಭಾರಿ ಹರೇಕಳ ಹಾಜಪ್ಪ, ಪೌರ ಕಾರ್ಮಿಕ ತಾಯಂದಿರಾದ ನಾಗಲಕ್ಷ್ಮಿ, ಮಂಜುಳ ಹಾಗೂ ತೃತೀಯ ಲಿಂಗಿ ಪ್ರಿಯಾಂಕ ಮತ್ತು ಇಬ್ಬರು ವಿಶೇಷ ಚೇತನ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡ-ಬಲದಲ್ಲಿ ನಿಂತು ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣಗೊಳಿಸಿದರು.