*ಕಾನೂನು ಹೋರಾಟದಲ್ಲಿ ಸಿದ್ದರಾಮಯ್ಯ ಗೆ ಮತ್ತೆ ಹಿನ್ನಡೆ / 3 ತಿಂಗಳಲ್ಲಿ ವರದಿಗೆ ಸೂಚನೆ*
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ದೊಡ್ಡ ಹಿನ್ನಡೆ ಅನುಭವಿಸಿದ್ದು,ಇದರ ಬೆನ್ನಲ್ಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಹ ಮತ್ತೊಂದು ಶಾಕ್ ನೀಡಿದೆ.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ಹೊರಡಿಸಿದೆಯಲ್ಲದೆ ಮೂರೂ ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರು ಲೋಕಾಯುಕ್ತ ಎಸ್ ಪಿಗೆ ಕೋರ್ಟ್ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ನಡೆದ ಘಟನೆಗಳ ಬಗ್ಗೆ ಕೂಡ ಜಡ್ಜ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ತನಿಖೆಗೆ ಹಿಂಜರಿಯಬಾರದು ಎಂಬ ಹೈಕೋರ್ಟ್ ತೀರ್ಪನ್ನು ಜಡ್ಜ್ ಉಲ್ಲೇಖಿಸಿದ್ದಾರೆ.
ದೂರುದಾರರಾದ ಸ್ನೇಹಮಯಿ ಕೃಷ್ಣ ಅವರ ವಕೀಲರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಾಹಂ ಜನಪ್ರತಿನಿಧಿಗಳ ಕೊರ್ಟ್ ನಲ್ಲಿಯೂ ಖಾಸಗಿ ದೂರು ಸಲ್ಲಿಸಿದ್ದಾರೆ. ಹೈಕೋರ್ಟ್ ಪ್ರಕಟಿಸಿರುವ ತೀರ್ಪಿನ ಪ್ರತಿ ಹಿಡಿದು ದೂರುದಾರರು ಜನಪ್ರತಿನಿಧಿಗಳ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಆದೇಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆದೇಶದ ಪ್ರತಿ ಬಂದ ನಂತರ ಪ್ರತಿಕ್ರಿಯೆ ನೀಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನೊಂದೆಡೆ ವಿರೋಧ ಪಕ್ಷಗಳ ರಾಜಿನಾಮೆ ಬೇಡಿಕೆ ಮತ್ತಷ್ಟು ಜೋರಾಗುವ ಸಾಧ್ಯತೆಗಳಿವೆ. ವಿಪಕ್ಷ ನಾಯಕ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡಲೇ ರಾಜೀನಾಮೆ ನೀಡಲು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಹರಿಯಾಣ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕ ಸಿದ್ದರಾಮಯ್ಯ ಹಗರಣ ಪ್ರಸ್ತಾಪಿಸಿ ಇಲ್ಲಿ ಆ ತಪ್ಪು ಮಾಡಬೇಡಿ ಎಂದಿದ್ದಾರೆ.