*ಒಂದೇ ದಿನ ದರೋಡೆಕೋರರು, ಕಿಸೆಗಳ್ಳರು, ಮನೆಗಳ್ಳರು, ಬಡ್ಡಿಕುಳಗಳು ಬಲೆಗೆ*
ಹುಬ್ಬಳ್ಳಿ: ವಾಣಿಜ್ಯ ನಗರಿ ಮತ್ತು ವಿದ್ಯಾಕಾಶಿ ಹಿರಿಮೆಯ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನೂತನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರ ಖಡಕ್ ಖಾಕಿ ಖದರ್ ಅಲ್ಲದೇ ಜನಸ್ನೇಹಿ ಚಿಂತನೆ ಮೂಲಕ ಕಳೆದ ಮೂರು ತಿಂಗಳಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆಯಲ್ಲದೇ ಮಾತೆತ್ತಿದರೆ ಚಾಕು ತೆಗೆಯುವ, ದಾದಾಗಿರಿಯನ್ನೆ ಬಂಡವಾಳವಾಗಿಸಿಕೊಂಡವರು, ಅಕ್ರಮ ದಂಧೆಕೋರರ ಪಾಲಿಗೆ ಸಿಂಹಸ್ವಪ್ನವಾಗಿದೆ.
ಇಂತಹದ್ದೇ ಸ್ಥಿತಿ ಎರಡು ದಶಕಗಳ ಹಿಂದೆ ಕೆ.ವಿ.ಗಗನದೀಪ ಆಯುಕ್ತರಾಗಿದ್ದಾಗ ಇತ್ತು. ಸಾಮಾನ್ಯವಾಗಿ ಯಾವುದೇ ಪೊಲೀಸ್ ಅಧಿಕಾರಿಯಿದ್ದರೂ ಹಿರಿಯ ಅಧಿಕಾರಿಗಳು ‘ನಾನಿದ್ದೇನೆ’ ಅಕ್ರಮಕ್ಕೆ ಪುಲ್ಸ್ಟಾಫ್ ಹಾಕಿ ಎಂಬ ಇಶಾರೆ ನೀಡಿದರೆ ಸಾಕು ಎಲ್ಲ ಠಾಣೆಗಳ ತ್ರೀ ಸ್ಟಾರ್ಗಳಾದಿಯಾಗಿ ಎಲ್ಲರೂ ಕ್ರೀಯಾಶೀಲರಾಗುತ್ತಾರೆ. ಇಂದು ಹಾಗೇ ಆಗಿದೆ. ಒಂದೇ ದಿನ ಸುಮಾರು ನಾಲ್ಕೈದು ಕೇಸ್ಗಳನ್ನು ಅವಳಿನಗರದಲ್ಲಿ ಪೊಲೀಸರು ಪೈಪೋಟಿಗೆ ಬಿದ್ದವರಂತೆ ಪತ್ತೆ ಹಚ್ಚುತ್ತಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಇದು ಬಹುತೇಕ ಸರ್ವೇಸಾಮಾನ್ಯವಾಗಿದ್ದು, ಪರಾರಿಯಾಗಲೆತ್ನಿಸಿದ ನಾಲ್ಕೈದು ಮಂದಿಯ ಕಾಲಿಗೆ ಬಿದ್ದ ಗುಂಡೇಟು ರೌಡಿಶೀಟರ್ಸಗಳ ಮೀಟರ್ ತಣ್ಣಗಾಗಿಸಿದೆ. ಯಾವ ಅಧಿಕಾರಗಳು ಸೊಂಟದಲ್ಲಿನ ರೈಫಲ್ ತೆಗೆಯಲು ಹಿಂದೇಟು ಹಾಕುತ್ತಿಲ್ಲ. ಬಡ್ಡಿಕುಳಗಳ ಬೆನ್ನು ಬಿದ್ದಿರುವ ಆಯುಕ್ತರು ಹಲವರಿಗೆ ಸೆರೆವಾಸದ ಭಾಗ್ಯ ಕರುಣಿಸಿದ್ದರೂ ಅನೇಕ ದೊಡ್ಡ ತಿಮಿಂಗಲುಗಳು ಮಾತ್ರ ಸದ್ದಿಲ್ಲದೇ ಮುಂದುವರಿಸಿವೆ. ಗಾಂಜಾ ಘಾಟು ಹತೋಟಿಗೆ ಬಂದಿದೆ. ವಾರದ ಕೊನೆಯಲ್ಲಿ ನಂಗಾನಾಚ್ ನಡೆಸುವ ಐಷಾರಾಮಿ ಹೋಟೆಲ್ ಗಳು ಅರೆಬೆತ್ತಲೆ ಸೇವೆಗೆ ಅಲ್ಪ ವಿರಾಮ ಹಾಕಿವೆ.
ಗಗನ್ದೀಪಗೆ ಅಂದು ಡಿಸಿಪಿ ರವಿಕಾಂತೇಗೌಡ ಜೋಡಿಯಾಗಿದ್ದರಲ್ಲದೇ ಕಮರಿಪೇಟೆಯ ಅಕ್ರಮ ಸಾಮ್ರಾಜ್ಯವನ್ನೇ ಪುಡಿ ಮಾಡಿತ್ತು. ಆಯುಕ್ತ ಗಗನದೀಪ್ ವಾಕಿಯಲ್ಲಿ ಮಾತನಾಡಿದರೆ ಸ್ಟೇಶನ್ನಲ್ಲಿ ಕುರ್ಚಿಯ ಮೇಲೆ ಕುಳಿತಿರುತ್ತಿದ್ದ ಅಧಿಕಾರಿ ನಿಂತು ಸೆಲ್ಯೂಟ್ ಮಾಡುತ್ತಿದ್ದರು.
ಇಂದು ಸಹ ಶಶಿಕುಮಾರ್ಗೆ ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ಸಿ.ಆರ್.ರವೀಶ, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ಚಿಕ್ಕಮಠ, ಸಿದ್ದನಗೌಡರ ಎಲ್ಲಾ ಸಾಥ್ ನೀಡುತ್ತಿದ್ದು ಚೋಟಾ ಮುಂಬೈನಲ್ಲೂ ಪೊಲೀಸಿಂಗ್ ಇದೆ ಎಂಬುದು ಸಾಭೀತಾಗುತ್ತಿದೆ. ಅಲ್ಲದೇ ಗಣೇಶೋತ್ಸವ, ಈದ್ ಮಿಲಾದ ವೇಳೆ ಸಣ್ಣ ಘಟನೆಗೂ ಆಸ್ಪದ ನೀಡದಿರುವುದು ಸಾಬೀತುಪಡಿಸಿದೆ.
*ರಿಂಗ್ ರೋಡ್ ದರೋಡೆ ಗ್ಯಾಂಗ್ ಅಂದರ್*
ಇಂದು ಬೆಂಡಿಗೇರಿ ಠಾಣೆ ಪೊಲೀಸರು ನಗರದ ಹೊರವಲಯದ ರಿಂಗ್ ರೋಡ್ನಲ್ಲಿ ವಾಹನ ಸವಾರರ ಮೇಲೆ ಖಾರದ ಪುಡಿ ಎರಚಿ ದರೋಡೆ ಮಾಡುತ್ತಿದ್ದ ಏಳು ಜನರ ತಂಡ ಬಂಧಿಸಿ
4100 ರೂ ನಗದು ಸೇರಿದಂತೆ ಮೂರು ಮೊಬೈಲ್, ಎರಡು ದ್ವಿಚಕ್ರ ವಾಹನ, ಒಂದು ಚಾಕು, ಖಾರದ ಪುಡಿ, ಒಂದು ಆಟೋ ವಶಪಡಿಸಿಕೊಂಡಿದೆ.
ಗಂಗಾಧರನಗರದ ಭೀಮರಾವ್ ತಾವರಗೊಪ್ಪ, ರವಿ ಗೋಕಾಕ್, ಕೆ.ಬಿ.ನಗರದ ದೀಪಕ್ ನರಗುಂದ, ಶ್ರೀನಿವಾಸ್ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ್ ಸಾತಪತಿ, ಗೋಪನಕೊಪ್ಪದ ನಾಗರಾಜ್ ಬಳ್ಳಾರಿ ಎಂಬುವವರೆ ಬಂಧಿಸಲ್ಪಟ್ಟವರಾಗಿದ್ದು
ಬೆಂಡಿಗೇರಿ ಪೊಲೀಸ್ ಠಾಣೆಯ ಪಿಐ ಎಸ್.ಆರ್.ನಾಯಕ್ ನೇತೃತ್ವದ ತಂಡದಲ್ಲಿ ಪಿಎಸ್ಐ ರವಿ ವಡ್ಡರ, ಎಎಸ್ಐ ಟಿ.ಎನ್. ಸವದತ್ತಿ, ಸಿಬ್ಬಂದಿ ಪಿ.ಜಿ.ಪುರಾಣಿಕಮಠ, ಎನ್.ಐ. ನಿಲಗಾರ್, ಪಿ.ಎಫ್.ಅಂಬಿಗೇರ್, ಆರ್.ಎಸ್.ಹರ್ಕಿ, ರಮೇಶ ಹಿತ್ತಲಮನಿ, ಹನುಮಂತ ಕರಗಾವಿ, ಸೋಮು ಮೇಟಿ, ಬಸವರಾಜ ಗಳಗಿ, ಗುಡ್ಡಪ್ಪ ಒಗ್ಗಣ್ಣವರ, ಬಸು ಗೌಡರ, ಹನುಮಂತ ಆಲೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
*ಬಡ್ಡಿ ಕಿರುಕುಳ : ಮೂವರು ಅರೆಸ್ಟ್*
ಧಾರವಾಡ ಶಹರ ಠಾಣೆಯ ಸಿಪಿಐ ಎನ್.ಜಿ. ಕಾಡದೇವರ ಹಾಗೂ ಸಿಬ್ಬಂದಿ ಎಸಿಪಿ ಪ್ರಶಾಂತ ಸಿದ್ದನಗೌಡರ ಮಾರ್ಗದರ್ಶನದಲ್ಲಿ
ಬಡ್ಡಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ವಿಷ ಸೇವಿಸಿದ ಘಟನೆಗೆ ಸಂಬಂಧಿಸಿದಂತೆ
ಗೊಲ್ಲರ ಕಾಲನಿಯ ನಜೀರಸಾಬ ಅತ್ತಾರನಿಗೆ ಸಾಲ ನೀಡಿ ಬಡ್ಡಿಗೆ ಕಿರುಕುಳ ನೀಡಿದ್ದ ಗೊಲ್ಲರ ಕಾಲನಿಯ ಗುಲಿಗೆಪ್ಪ ಬಳ್ಳಾರಿ, ಲಕ್ಷ್ಮಣ ಬಳ್ಳಾರಿ ಹಾಗೂ ಶಂಕರ ಗೊಲ್ಲರ ಎಂಬುವವರಿಗೆ ಕೋಳ ತೊಡಿಸಿದೆ.
*ಕುಖ್ಯಾತ ಮನೆಗಳ್ಳಿ ಬಲೆಗೆ*
ಅಶೋಕ ನಗರ ಠಾಣೆ ಪೊಲೀಸರು ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಮನೆಗಳ್ಳಿ ಗಂಗಾಧರನಗರದ ರತ್ನವ್ವ ಬಾಳಿಮೇಡ್ ( ೪೫) ಹಾಗೂ ಆಕೆಗೆ ಸಹಕಾರ ನೀಡುತ್ತಿದ್ದ ಕುಸುಗಲ್ ನಿವಾಸಿ ಮುಕ್ತುಂಸಾಬ ಕುಂಬಿ ಎಂಬವರನ್ನು ಬಂಧಿಸಿ ೫.೩೩ಲಕ್ಷ ರೂ ಮೌಲ್ಯದ ಆಭರಣಗಳನ್ನು ಇನ್ಸಪೆಕ್ಟರ್ ಮಂಜುನಾಥ ಟೀಮ್ ವಶಪಡಿಸಿಕೊಂಡಿದೆ.
*ಮೊಬೈಲಗಳ್ಳರು ಅಂದರ್*
ಗಣೇಶ ಮೂರ್ತಿ ವಿಸರ್ಜನೆಯನ್ನೇ ಬಂಡವಾಳವಾಗಿಸಿಕೊಂಡು ಡಿಜೆ ಅಬ್ಬರಕ್ಕೆ ಕುಣಿಯವವರ ಮೊಬೈಲ್ ದೋಚುತ್ತಿದ್ದ ಇಬ್ಬರನ್ನು ಸಹ ಬೆಂಡಿಗೇರಿ ಪೊಲೀಸರು ಬಂಧಿಸಿ ಅವರಿಂದ ವಿವಿಧ ಕಂಪನಿಯ ೨೨ ಮೊಬೈಲ್ ಅಲ್ಲದೇ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.ಮರಾಠಾ ಗಲ್ಲಿ ಗಣೇಶ ವಿಸರ್ಜನೆ ಮತ್ತು ಶಿಗ್ಗಾಂವಿಯಲ್ಲಿ ಇವರು ಈ ಮೊಬೈಲ್ ಕದ್ದಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಗಂಗಾಧರನಗರದ ವೆಂಕಟೇಶ ಕೊರವರ ಅಲ್ಲದೇ ಮಂಟೂರ ರಸ್ತೆಯ ಸಿದ್ಧಾರೂಡ ದೊಡ್ಡಮನಿ ಬಂಧಿತರಾದವರಾಗಿದ್ದಾರೆ.
*ದಿನದ ಪ್ರಮುಖ ಸುದ್ದಿಗಳು*
*ಮುಡಾ ಹಗರಣದಲ್ಲಿ ಹಣ ವರ್ಗಾವಣೆ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ಜಾರಿ ನಿರ್ದೇಶನಾಲಯದಿಂದ ಪ್ರಕರಣ ದಾಖಲು, ಹೆಚ್ಚಿದ ಸಂಕಷ್ಟ*
*ಕೇಂದ್ರ ಸಚಿವ ಕುಮಾರಸ್ವಾಮಿ ಮೈನಿಂಗ್ ಹಗರಣದ ಜಾಮೀನು ರದ್ದು ಕೋರಲಿರುವ ಎಸ್ ಐಟಿ, ಬಂಧನ ಭೀತಿ*
*ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟನಿಂದ ಅನುಮತಿ*
*ಧಾರವಾಡ ಜಿಲ್ಲೆ ಪ್ರವೇಶಿಸಿದ ಕನ್ನಡ ಜ್ಯೋತಿ ರಥಯಾತ್ರೆ, ಅಣ್ಣಿಗೇರಿಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮತ್ತು ಶಾಸಕ ಎನ್ .ಎಚ್.ಕೋನರೆಡ್ಡಿಯವರಿಂದ ಸ್ವಾಗತ, ನಾಳೆಯೂ ಜಿಲ್ಲೆಯಾದ್ಯಂತ ಸಂಚಾರ*