*ಮಹಾರಾಷ್ಟ್ರ, ಜಾರ್ಖಂಡ ಚುನಾವಣಾ ದಿನಾಂಕ ಘೋಷಣೆ*
ಹೊಸದಿಲ್ಲಿ : ಮಹಾರಾಷ್ಟ್ರ ಮತ್ತು ಜಾರ್ಖಂಡ್ನ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಇಂದು ಚುನಾವಣಾ ಆಯೋಗ ಪ್ರಕಟಿಸಿದ್ದು, ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಜಾರ್ಖಂಡ್ನಲ್ಲಿ ನ.13 ಮತ್ತು ನ.20ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಪ್ರಕಟಿಸಿದ್ದಾರೆ.
ಇದಲ್ಲದೆ ಕರ್ನಾಟಕದ ಶಿಗ್ಗಾಂವಿ, ಚನ್ನಪಟ್ಟಣ ಅಲ್ಲದೇ ಸಂಡೂರಗಳಲ್ಲೂ ನ.13ರಂದೇ ಮತದಾನ ನಡೆಯಲಿದ್ದು ಎಲ್ಲ ಫಲಿತಾಂಶ ನ.23ಕ್ಕೆ ಪ್ರಕಟಗೊಳ್ಳಲಿದೆ.
ಒಟ್ಟು 15ರಾಜ್ಯಗಳ 48 ವಿಧಾನಸಭೆ ಮತ್ತು ವಯನಾಡು ಸೇರಿ 2 ಲೋಕಸಭೆಗಳಿಗೂ ಉಪಚುನಾವಣೆ ನಡೆಯಲಿದೆ.
288ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26ಕ್ಕೆ ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯು 2025ರ ಜನವರಿ 5ರಂದು ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಕೂಡಿದ ಆಡಳಿತಾರೂಢ ಮಹಾಯುತಿ ಒಕ್ಕೂಟವು ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ವಿರುದ್ಧ ಸ್ಪರ್ಧಿಸಲಿದೆ.
ಜಾರ್ಖಂಡ್ನಲ್ಲಿ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಮೈತ್ರಿ, ಹಾಲಿ ಜಾರ್ಖಂಡ್ ವಿದ್ಯಾರ್ಥಿ ಸಂಘ, ಜೆಡಿಯು-ಬಿಜೆಪಿ ಒಳಗೊಂಡ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸ್ಪರ್ಧಿಸಲಿದೆ.ಒಟ್ಟಿನಲ್ಲಿ ಈ ಎರಡು ಚುನಾವಣೆಗಳು ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟಗಳಿಗೆ ದೊಡ್ಡ ಸವಾಲಾಗಿದೆ.
*ಬೊಮ್ಮಾಯಿ ಸ್ಥಾನಕ್ಕೆ ಪೈಪೋಟಿ*
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಹಾವೇರಿ ಜಿಲ್ಲೆಯ ಶಿಗ್ಗಾವಿ ಸ್ಥಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಡಜನ್ಗಟ್ಟಲೆ ಆಕಾಂಕ್ಷಿಗಳಿದ್ದು, ಪೈಪೋಟಿ ತೀವ್ರವಾಗಿದ್ದರೂ ಕೇಸರಿಪಡೆಯಿಂದ ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ ಅಥವಾ ಮಾಜಿ ಸಚಿವ ಮುರುಗೇಶ ನಿರಾಣಿ ಒಬ್ಬರು ಖಚಿತ ಎನ್ನಲಾಗುತ್ತಿದೆ.
ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರಿಗೋ ಅಥವಾ ಬಹು ಸಂಖ್ಯಾತರಿಗೊ ಜಿಜ್ಞಾಸೆ ಜೋರಾಗಿದೆ. ಮಾಜಿ ಶಾಸಕ ಅಜ್ಜಂ ಫೀರ ಖಾದ್ರಿ, ಕಳೆದ ಬಾರಿ ಕಣಕ್ಕಿಳಿದಿದ್ದ ಯಾಸೀರ ಖಾನ ಪಠಾಣ ನಡುವೆ ಇನ್ನಿಲ್ಲದ ಪೈಪೋಟಿಯಿದ್ದು, ಮಾಜಿ ಸಚಿವ ಆರ್.ಶಂಕರ, ಮಾಜಿ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ , ಯುವ ಮುಖಂಡ ರಾಜು ಕುನ್ನೂರ, ಸಂಜೀವ ಕುಮಾರ ನೀರಲಗಿ,ಪ್ರೇಮಾ ಪಾಟೀಲ, ರಾಜೇಶ್ವರಿ ಪಾಟೀಲ ಮುಂತಾದವರ ಹೆಸರು ಚಾಲ್ತಿಯಲ್ಲಿದೆ.