*ಜನಪ್ರತಿನಿಧಿಗಳ ವಿಶೇಷ ಕೋರ್ಟನಿಂದ ಶಿಕ್ಷೆ ಪ್ರಮಾಣ ಪ್ರಕಟ*
ಬೆಂಗಳೂರು : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ -ಅಂಕೋಲಾ ಕ್ಷೇತ್ರದ ಕೈ ಶಾಸಕ ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. ೨೪ರಂದು ವಿಶೇಷ ನ್ಯಾಯಾಲಯದ ನ್ಯಾ.ಸಂತೋಷ್ ಗಜಾನನ ಭಟ್, ಪ್ರಕರಣದ ಎಲ್ಲಾ ೬ ಕೇಸ್ ಗಳಲ್ಲಿಯೂ ಶಾಸಕ ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದರು.
ಇಂದು ನ್ಯಾ.ಸಂತೋಷ್ ಗಜಾನನ ಭಟ್ ಆರೋಪಿಗಳ ಶಿಕ್ಷೆ ಪ್ರಮಾಣ ಪ್ರಕಟಿಸಿ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಮೊದಲ ಪ್ರಕರಣದಲ್ಲಿ ಶಾಸಕ ಸೈಲ್ ಗೆ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ. 2ನೇ ಕೇಸ್ ನಲ್ಲಿ 3ವರ್ಷ ಜೈಲು ಶಿಕ್ಷೆ ಹಾಗೂ 9ಕೋಟಿ 60 ಲಕ್ಷ ಡಂಡ ವಿಧಿಸಲಾಗಿದೆ.
3ನೇ ಕೇಸ್ ವಂಚನೆ ಪ್ರಕರಣದಲ್ಲಿ ಸತೀಶ್ ಸೈಲ್ ಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. 4ನೇ ಕೇಸ್ ನಲ್ಲಿ ಕೂಡ ಸತೀಶ್ ಸೈಲ್ ಗೆ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. 5ನೇ ಕೇಸ್ ನಲ್ಲಿಯೂ 7ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಒಟ್ಟು 44 ಕೋಟಿ ರೂಪಾಯಿಗೂ ಹೆಚ್ಚು ದಂಡ ವಿಧಿಸಲಾಗಿದ್ದು, ವಿಧಿಸಿದ ದಂಡದ ಮೊತ್ತವನ್ನು ಸರ್ಕಾರಕ್ಕೆ ಜಪ್ತಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ. ಯಾವುದೇ ಪ್ರಕರಣದಲ್ಲಿ ಜನಪ್ರತಿನಿಧಿಗಳಿಗೆ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ, ಅವರನ್ನು ಅನರ್ಹಗೊಳಿಸಲಾಗುತ್ತದೆ.
ಸತೀಶ ಸೈಲ ಜತೆ ಆರಣ್ಯಾಧಿಕಾರಿ ಮಹೇಶ ಬಿಲಿಯಾಗೂ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಖಾರದಪುಡಿ ಮಹೇಶ, ಮಲ್ಲಿಕಾರ್ಜುನ ಶಿಪ್ಪಿಂಗ್ಗೂ ಶಿಕ್ಷೆ ವಿಧಿಸಲಾಗಿದೆ.
ದಿನದ ಮಹತ್ವದ ಸುದ್ದಿ*
1) ಶಿಗ್ಗಾಂವಿಯ ಉಪಸಮರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಸಚಿವ ಜಮೀರ ಅಹ್ಮದ, ನಸೀರ ಅಹ್ಮದ , ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮತ್ತಿತರರು ಇಂದು ಖಾದ್ರಿಯವರನ್ನು ಸಿಎಂ ಬಳಿ ಕರೆದೊಯ್ದು ಮಾತುಕತೆ ನಡೆಸಿದ್ದು ಸಂಧಾನ ಯಶಸ್ವಿಯಾಗಿದ್ದು ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿದೆ.
2) ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ ಪಂದ್ಯದಲ್ಲಿ ಸೋಲುಂಡ ಭಾರತ ಪುಣೆಯಲ್ಲಿನ ಎರಡನೇ ಟೆಸ್ಟನಲ್ಲೂ ಹೀನಾಯ ಸೋಲುಂಡಿದ್ದು ಪ್ರವಾಸಿ ಕಿವೀಸ್ ತಂಡ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 359 ರನ್ನುಗಳ ಗುರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಭಾರತ ಇಂದು 245ರನ್ನುಗಳಿಗೆ ಆಲೌಟ್ ಆಗುವ ಮೂಲಕ 113 ರನ್ನುಗಳ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಕಿತ್ತಿದ್ದ ಮಿಚೆಲ್ ಸ್ಯಾಂಟ್ನರ್ ದ್ವಿತೀಯ ಸರದಿಯಲ್ಲೂ 6ವಿಕೆಟ್ ಕಿತ್ತು ಸೋಲಿನ ದವಡೆಗೆ ಸಿಲುಕುವಂತೆ ಮಾಡಿದರು.ಜೈಸ್ವಾಲ್ 77 ,ರವೀಂದ್ರ ಜಡೇಜಾ 42, ಗಿಲ್ 23 , ವಾಷಿಂಗ್ಟನ್ ಸುಂದರ 21ರನ್ನುಗಳ ಕಾಣಿಕೆ ನೀಡಿದರು.
3) ರಾಜ್ಯದಲ್ಲಿ ಸುರಿದ ಸತತ ಮಳೆಯಿಂದ ಜಿಲ್ಲೆಗಳಲ್ಲಿ ಆಗಿರುವ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು.ಸಚಿವರು, ಇತರ ಅಧಿಕಾರಿಗಳು ಇದ್ದರು.
4) ಮುಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿಯವರನ್ನು ವಿಚಾರಣೆಗೊಳಪಡಿಸಿರುವ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ನೋಟಿಸ್ ನೀಡಿ ವಿಚಾರಣೆಗೊಳಪಡಿಸಲು ಸಿದ್ದತೆ ನಡೆಸಿದ್ದಾರೆನ್ನಲಾಗಿದೆ.