* ಸಿಎಂ ಸ್ಥಾನಕ್ಕೆ ರಾಜೀನಾಮೆ ಪ್ರಶ್ನೆಯೇ ಇಲ್ಲ*
ಬಳ್ಳಾರಿ: ಕೋರೋನ ಅವಧಿಯಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ, ಆರೋಗ್ಯ ರಕ್ಷಣೆಯ ಸಾಮಗ್ರಿಗಳ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ನೇತೃತ್ವದ ಆಯೋಗ ರಚಿಸಲಾಗಿದೆ, ವರದಿ ಇನ್ನೂ ಕೈ ಸೇರಿಲ್ಲ, ಪತ್ರಿಕೆಯಲ್ಲಿ ಓದಿದ್ದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ತೋರಣಗಲ್ಲಿನಲ್ಲಿ ಸಂಜೆ ಮುಖ್ಯಮಂತ್ರಿಗಳು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಮಾಜಿ ಸಿ.ಎಂ.ಯಡಿಯೂರಪ್ಪ ಅವರು ಇದೆಲ್ಲ ಸುಳ್ಳು ಎನ್ನುತ್ತಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನ್ಯಾಯಾಲಯವಿದೆ. ಸತ್ಯಾಸತ್ಯತೆ ಬಯಲಾಗಲಿದೆ.
ಬಿಜೆಪಿಯವರು ಎಲ್ಲವನ್ನೂ ಸುಳ್ಳು ಅಂತಾರೆ. ಅವರು ಸುಳ್ಳಿನ ಪಿತಾಮಹ, ಯಡಿಯೂರಪ್ಪ ಅವರು ಸಿ.ಎಂ.ಆಗಿದ್ದಾಗ ಕೋವಿಡ್ ಹಗರಣಗಳನ್ನು ನಾನು ವಿರೋಧಪಕ್ಷದ ನಾಯಕನಾಗಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಆಯೋಗದ ವರದಿ ಬರಲಿ, ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟಿರುವ ದುರ್ಘಟನೆಗಳು ನಡೆದವು. ಇದನ್ನೂ ಸಚಿವರಾಗಿದ್ದ ಸುಧಾಕರ್ ಅವರು ಸುಳ್ಳು ಸುಳ್ಳು ಎಂದರು. ನಾನು ಮತ್ತು ಡಿ.ಕೆ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಅಲ್ಲಿ ಸಮಸ್ಯೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಲಾಯಿತು ಎಂದರು.
ಸಾಲು ಸಾಲು ಹಗಣರಾಗಲ್ಲಿ ಸಿಲುಕಿದ್ದು, ಶೀಘ್ರದಲ್ಲೇ ಸಿ.ಎಂ.ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಉತ್ತರಿಸಿದ ಅವರು, ನಾನು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವವನು.
ನಾನು ಸಣ್ಣ ತಪ್ಪೂ ಮಾಡಿಲ್ಲ, ಮಾಡೋದು ಇಲ್ಲ, ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಯತ್ನಾಳ್ ಅವರು ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪ ಅವರು 2 ಸಾವಿರ ಕೋಟಿ ಕೊಟ್ಟು ಮುಖ್ಯಮಂತ್ರಿ ಆದ್ರು. ಇವರ ಪುತ್ರ ವಿಜಯೇಂದ್ರ ಕೂಡ ದುಡ್ಡು ಕೊಟ್ಟೇ ಪಕ್ಷದ ಅಧ್ಯಕ್ಷ ಆಗಿದ್ದು ಅಂತ ಯತ್ನಾಳ್ ಅವರೇ ಹೇಳಿದ್ದಾರೆ. ಇವರಿಗೆ ಸಾವಿರ ಸಾವಿರ ಕೋಟಿ ಎಲ್ಲಿಂದ ಬಂತು? ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕು ಎಂದರು.
ಬಿಜೆಪಿಯವರು ವಕ್ಫ್ ವಿಚಾರವನ್ನು ಉಪಚುನಾವಣೆ ವೇಳೆಯಲ್ಲೇ ಕೃತಕವಾಗಿ ಸೃಷ್ಟಿಸಿರುವುದರ ಹಿಂಂದಿನ ಉದ್ದೇಶ ಏನು ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಬಿಜೆಪಿ ಘೋಷಿಸಿದೆ. ಬಿಜೆಪಿ ಸರ್ಕಾರವೇ 216 ಮಂದಿ ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು. ಈಗ ನೋಟಿಸ್ ನೀಡಿದವರೇ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇದು ನಮ್ಮ ಸ್ಪಷ್ಟ ತೀರ್ಮಾನ ಎಂದರು.
ಸಚಿವ ಸಂತೋಷ್ ಲಾಡ್, ಸಂಸದ
ಈ.ತುಕಾರಾಮ್ ಅವರು ಉಪಸ್ಥಿತರಿದ್ದರು.
*ದಿನದ ಮಹತ್ವದ ಸುದ್ದಿಗಳು* :
1)ಯಾವುದೇ ವಕ್ಫ್ ಆಸ್ತಿ ಮಾಡಲು ಬಂದ್ರೆ ಜನರೆಲ್ಲಾ ಸೇರಿ ಓಡಿಸಿ ಎಂದು ಹುಬ್ಬಳ್ಳಿಯಲ್ಲಿ ಜನರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದ್ದು,
ಈಗಿನ ಸರ್ಕಾರದಲ್ಲಿ ಯಾರದ್ದು ಯಾವ ಜಮೀನು ವಕ್ಫ್ ಆಸ್ತಿ ಎಂದಾಗುತ್ತದೋ ಗೊತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರತಿ ತಿಂಗಳು ತಮ್ಮ RTC ತೆಗೆದು ನೋಡುತ್ತೀರಿ ಎಂದೂ ಹೇಳಿದ್ದಾರೆ.
2) ಪಕ್ಷದಲ್ಲಿನ ಆಂತರಿಕ ಕಲಹದಿಂದ ಬೇಸತ್ತು ಅನೇಕ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಮಾಜಿ ಸಚಿವ, ಅಥಣಿ ಶಾಸಕ ಲಕ್ಷ್ಮಣ ಸವದಿ ಹುಬ್ಬಳ್ಳಿಯಲ್ಲಿ ಬಾಂಬ್. ಸಿಡಿಸಿದ್ದಾರೆ.
3)ಪೌರಾಣಿಕ ಕಥಾ ಹಂದರದ ತಾರಕೇಶ್ವರ ಚಿತ್ರ ದಿ.15ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ,333ನೇ ಚಿತ್ರದಲ್ಲಿ ಕಾಣಿಸಿಕೊಂಡಿರುವ ಗಣೇಶ ಕೇಸರಕರ್ ಹೇಳಿದ್ದಾರೆ.
4) ನಾಳೆ ಶಿಗ್ಗಾಂವಿಯಲ್ಲಿ ಸಿಎಂ ಸಿದ್ದರಾಮಯ್ಯ ಕೈ ಅಭ್ಯರ್ಥಿ ಪರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸಲಿದ್ದಾರೆ.