*ಬೀದರಿನ ಶ್ರೀ ಸಿದ್ಧಾರೂಢರ ಜನ್ಮಸ್ಥಳದಿಂದ ಆರಂಭ* / *ಆಂಧ್ರ, ಮಹಾರಾಷ್ಟ್ರ,ಗೋವಾಗಳಲ್ಲಿ ಸಂಚರಿಸಿ ಫೆ.19ಕ್ಕೆ ಹುಬ್ಬಳ್ಳಿಗೆ* /
*ಫೆ.20ರಿಂದ ವಿಶ್ವಶಾಂತಿಗಾಗಿ ವಿಶ್ವ ವೇದಾಂತ ಪರಿಷತ್*
ಹುಬ್ಬಳ್ಳಿ: ಬಿಳಿಯ ಬಣ್ಣದ ಸರಳ ಉಡುಗೆ, ಆಡಂಬರವಿಲ್ಲದ ಸಹಜ ಬದುಕು , ಭೇದವರಿಯದ ಮಾತೃವಾತ್ಸಲ್ಯದ ಹೃದಯ, ಉದಾತ್ತವಾದ ವಿಚಾರಧಾರೆ, ಶಿವ ಪಂಚಾಕ್ಷರಿ ಮಹಾಮಂತ್ರ ಸಾರ್ವತ್ರಿಕವಾಗಿ ಉಪದೇಶಿಸಿದ ಗುರುರಾಜರು ಶ್ರೀ ಸಿದ್ಧಾರೂಢರು.
ಪರಮಾತ್ಮನಿಗೆ ಜಾತಿ,ಮತ,ಪಂಥಗಳ ಭೇದವಿಲ್ಲ.ಆತನಿಗೆ ಎಲ್ಲರೂ ಒಂದೇ ಎಂದು ಸಾರಿದ ಮಾತನಾಡುವ ಮಹಾದೇವರೆ ಆಗಿದ್ದ ಜಗದ್ಗುರು ಶ್ರೀ ಸಿದ್ಧಾರೂಢರ 190ನೇ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ ಆರೂಢ ಜ್ಯೋತಿಯಾತ್ರೆಯು ದಿ. 23ರಂದು ಮಧ್ಯಾಹ್ನ 4ಗಂಟೆಗೆ ಶ್ರೀ ಸಿದ್ಧಾರೂಢರ ಜನ್ಮ ಸ್ಥಳವಾದ ಬೀದರ ಜಿಲ್ಲೆಯ ಚಳಕಾಪುರದಲ್ಲಿ ಆರಂಭಗೊಳ್ಳಲಿದೆ.
ರಥಯಾತ್ರೆ ಚಾಲನೆ ಸಂದರ್ಭದಲ್ಲಿಯೇ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಕ್ಯಾಲೆಂಡರ ಮತ್ತು ಪಾಕೀಟ್ ಡೈರಿಗಳನ್ನು ಬಿಡುಗಡೆ ಮಾಡಲಿದ್ದು, ಡಾ.ಶಿವಕುಮಾರ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ಹೈಕೋರ್ಟ ನ್ಯಾಯಮೂರ್ತಿ ಕೆ.ನಟರಾಜನ್ ,ಆಡಳಿತಾಧಿಕಾರಿ ಬಿ.ಜಿ.ರಮಾ, ಸಚಿವರಾದ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ, ಸಂಸದ ಸಾಗರ ಖಂಡ್ರೆ ಮುಂತಾದವರು ಪಾಲ್ಗೊಳ್ಳಿದ್ದಾರೆ.
ಚಳಕಾಪೂರದಿಂದ ಹೊರಡುವ ಯಾತ್ರೆಯು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಮತ್ತು ಸ್ಥಳಗಳಲ್ಲಿ ಸಂಚರಿಸಿ 2025ರ ಫೆಬ್ರುವರಿ 19ರಂದು ಹುಬ್ಬಳ್ಳಿ ಶ್ರೀ ಸಿದ್ಧಾರೂಢಮಠಕ್ಕೆ ಬಂದು ತಲುಪಲಿದೆ. ಅಂದು ಶ್ರೀ ಸಿದ್ಧಾರೂಢ ಕಥಾಮೃತ ಮೆರವಣಿಗೆ ಮತ್ತು ಶೋಭಾ ಯಾತ್ರೆ ನಡೆಯಲಿದ್ದು, 10 ಸಾವಿರ ಜನರು ಕಥಾಮೃತ ತಲೆಯ ಮೇಲೆ ಹೊತ್ತು ವಾದ್ಯ ಮೇಳಗಳೊಂದಿಗೆ ಮಠಕ್ಕೆ ಆಗಮಿಲಿದ್ದಾರೆ. ಫೆ.20ರಿಂದ 26ರವರೆಗೆ ವಿಶ್ವಶಾಂತಿಗಾಗಿ ವಿಶ್ವವೇದಾಂತ ಪರಿಷತ್ ನಡೆಯಲಿದ್ದು, ರಾಷ್ಟ್ರಪತಿ, ಮುಖ್ಯಮಂತ್ರಿ ಅನೇಕ ಸಚಿವರು, ಯೋಗ ಗುರು ರಾಮದೇವ ಬಾಬಾ ಸಹಿತ ನಾಡಿನ ನೂರಾರು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಲಕ್ಷಾಂತರ ಅಜ್ಜನ ಭಕ್ತರು ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಸಿದ್ಧತೆಗಳು ಆರಂಭಗೊಂಡಿವೆ.
ಯಾತ್ರೆಯ ಯಶಸ್ಸಿಗಾಗಿ ಶ್ರೀ ಸಿದ್ಧಾರೂಢ ಟ್ರಸ್ಟ್ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ, ಜ್ಯೋತಿ ಸಮಿತಿ ಕಾರ್ಯಾಧ್ಯಕ್ಷ ಶಾಮಾನಂದ ಪೂಜಾರಿ, ಯಾತ್ರೆ ಸಮಿತಿ ಅಧ್ಯಕ್ಷ ಉದಯಕುಮಾರ ನಾಯ್ಕ, ವೈಸ ಚೇರಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ವಿ.ವಿ. ಮಲ್ಲಾಪೂರ, ರಮೇಶ ಬೆಳಗಾವಿ, ಡಾ.ಗೋವಿಂದ ಮಣ್ಣೂರ, ಚನ್ನವೀರ ಮುಂಗುರವಾಡಿ, ಉದಯಕುಮಾರ ನಾಯ್ಕ, ಮ್ಯಾನೇಜರ್ ಈರಣ್ಣ ತುಪ್ಪದ ಸೇರಿದಂತೆ ಹಲವರು ಶ್ರಮಿಸುತ್ತಿದ್ದಾರೆ.