*ಕರ್ನಾಟಕ ಪೊಲೀಸ್ ದೇಶದಲ್ಲೇ ನಂ. 1*/ *ಸಿ.ಟಿ.ರವಿ ಪ್ರಕರಣ ಸಿಐಡಿ ತನಿಖೆಗೆ / ಸಿಲಿಂಡರ್ ಸ್ಪೋಟ ಪ್ರಕರಣದ ಗಾಯಾಳುಗಳಿಗೆ ಡಾ. ಪರಮೇಶ್ವರ್ ಸಾಂತ್ವನ*
ಹುಬ್ಬಳ್ಳಿ : ಯುವ ಜನರು ಡ್ರಗ್ಸ್ನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಡ್ರಗ್ಸ್ ಬಳಕೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಅವಳಿ ನಗರಗಳು ಡ್ರಗ್ಸ್ ಮುಕ್ತವಾಗಲಿವೆ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಹೇಳಿದರು.
ಇಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ,ಗೋಕುಲ ರೋಡ್ ಠಾಣೆ ಮತ್ತು ವಿದ್ಯಾನಗರ ಠಾಣೆಗಳ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪೊಲೀಸರು ಆಯಾ ಜಿಲ್ಲೆಗಳನ್ನು ಡ್ರಗ್ಸ್ ಮುಕ್ತ ಮಾಡುತ್ತೇವೆ ಎಂದಿದ್ದಾರೆ. ಅದೇ ರೀತಿಯಲ್ಲಿ ಹುಬ್ಬಳ್ಳಿ ಧಾರವಾಡ ನಗರಗಳನ್ನು ಡ್ರಗ್ಸ್ ಮುಕ್ತ ಮಾಡುವಲ್ಲಿ ಪೊಲೀಸ್ ಆಯುಕ್ತರು ಮುಂದಾಗಬೇಕು ಎಂದರು.
ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಕಂಡಿಲ್ಲ. ಕರಾವಳಿ ಭಾಗದಲ್ಲಿ ಕೋಮಗಲಭೆಯನ್ನು ಹತ್ತಿಕ್ಕಲು ಕೋಮುವಾದಿ ಚಟುವಟಿಕೆ ವಿರೋಧಿ ತಂಡ ( ಆ್ಯಂಟಿ ಕಮ್ಯುನಿಯಲ್ ಆ್ಯಕ್ಟಿವಿಟಿ ಟೀಮ್) ರಚನೆ ಮಾಡಲಾಗಿತ್ತು. ಮೂರು ತಿಂಗಳ ಒಳಗಾಗಿ ಕೋಮು ಗಲಭೆಗಳನ್ನು ನಿಯಂತ್ರಣಕ್ಕೆ ತರಲಾಯಿತು. ಪೊಲೀಸರು ಅಸಹಾಯಕರು ಎನ್ನುವ ಸಂದರ್ಭ ಬಂದಿಲ್ಲ ಎಂದು ಅವರು ಹೇಳಿದರು.
ದೇಶದಲ್ಲಿಯೇ ಕರ್ನಾಟಕ ಪೊಲೀಸ್ ಇಲಾಖೆ ನಂಬರ್ ಒನ್ ಸ್ಥಾನದಲ್ಲಿದೆ. ಟೀಕೆ, ಟಿಪ್ಪಣಿಗಳು ಬರುವುದು ಸಹಜ. ಟೀಕೆ, ಟಿಪ್ಪಣಿಗಳ ನಡುವೆ ಪೋಲೀಸ ಇಲಾಖೆ ಕಾರ್ಯ ನಿರ್ವಹಿಸಬೇಕಾಗಿದೆ. ಜನಸ್ಪಂದನೆ ನೀಡುವ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು. ಶೇಕಡಾ 95 ರಷ್ಟು ಪ್ರಕರಣಗಳನ್ನು 48 ಗಂಟೆಗಳಲ್ಲಿ ಬಗೆಹರಿಸಲಾಗಿದೆ. ಹೊರ ರಾಜ್ಯದಲ್ಲಿರುವ ಅಪರಾಧಿಗಳನ್ನು ಸಹ ಬಂಧಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವ ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ,ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ,ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಬೆಳಗಾವಿ ಉತ್ತರ ವಲಯದ ಆರಕ್ಷಕ ಮಹಾ ನಿರೀಕ್ಷಕರಾದ ವಿಕಾಸಕುಮಾರ ವಿಕಾಶ, ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್, ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ನಾರಾಯಣ ಭರಮನಿ ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಬ್ಯಾಕೋಡ ಇದ್ದರು.
ಇದಕ್ಕೆ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಸಿ.ಟಿ.ರವಿ ಪ್ರಕರಣ ಈಗಾಗಲೇ ಸಿಐಡಿ ತನಿಖೆಗೆ ನೀಡಲಾಗಿದೆ ಎಂದರಲ್ಲದೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರೊಬ್ಬ ಅಸಮರ್ಥ ಸಚಿವ ಎಂದು ಹೇಳಿದರೆ ಒಪ್ಪಿಕೊಳ್ಳುವರೇ ಎಂದು ತಮ್ಮ ಮೇಲೆ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು