ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡದಲ್ಲಿ ವ್ಯಾಪಕವಾಗಿದ್ದ ಮಾದಕ ವಸ್ತುಗಳ ಚಟುವಟಿಕೆ, ಮಿತಿ ಮೀರಿದ ಪುಡಿ ರೌಡಿಗಳ ಹಾವಳಿ ಹಾಗೂ ಇತರ ಅಕ್ರಮಗಳನ್ನು ಅಧಿಕಾರ ಸ್ವೀಕರಿಸಿದ ನಂತರ ಹತೋಟಿಗೆ ತಂದಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಸಾರ್ವಜನಿಕ ಸ್ನೇಹಿ ನಡವಳಿಕೆಯಿಂದ ಅವಳಿ ನಗರದಲ್ಲಿ ಮನೆ ಮಾತಾಗಿದ್ದಾರೆ.
ರಾತ್ರಿ ಗಸ್ತು, ದಿಢೀರ್ ದ್ವಿ ಚಕ್ರ ವಾಹನದಲ್ಲಿ ಸಂಚಾರ, ರೌಡಿಗಳ, ಡ್ರಗ್ ಮಾರಾಟಗಾರರ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡುವ ಅವರು ಪೊಲೀಸ್ ಕ್ರೀಡಾಕೂಟದಂತಹ ಸಂದರ್ಭದಲ್ಲಿ ಲಾಠಿ ಬಿಟ್ಟು ಮೈಕ್ ಕೈಗೆತ್ತಿಕೊಂಡರೆ ಸುಮಧುರ ಗೀತೆಗಳ ಮೂಲಕ ಯಾವ ಗಾಯಕರಿಗೂ ಕಡಿಮೆ ಇಲ್ಲದಂತೆ ಹಾಡಿ ಸೈ ಎನಿಸಿಕೊಂಡಿದ್ದಾರೆ.
ಶನಿವಾರ ಪಡಿ ಪೂಜೆ ನಿಮಿತ್ತ ವಿದ್ಯಾನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕುಟುಂಬದ ಜೊತೆ ಆಗಮಿಸಿದ್ದ ಪೊಲೀಸ್ ಆಯುಕ್ತ ಶಶಿಕುಮಾರ್ ಅಯ್ಯಪ್ಪನ ಹಾಡುಗಳನ್ನು ಹಾಡಿ ಭಕ್ತಿಯಲ್ಲಿ ಮಿಂದೆದ್ದು ,ಆಶೀರ್ವಾದ ಪಡೆದರು. ಮಹಾನಗರಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಅವರೂ ಸಹ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಆನಂದ್ ಗುರುಸ್ವಾಮಿ, ದೇವಸ್ಥಾನದ ಉಪಾಧ್ಯಕ್ಷ ಡಾ.ಚಿಗರುಪಾಟಿ ವಿ.ಎಸ್.ವಿ ಪ್ರಸಾದ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ, ಜಯರಾಂ ಶೆಟ್ಟಿ, ಮತ್ತಿತರರು ಅವರನ್ನು ಸನ್ಮಾನಿಸಿದರು. ದೀಪಾ ಗೌರಿ, ಮಂಗಳಮ್ಮ ಗೌರಿ, ಮಲ್ಲು ಸ್ವಾಮಿ, ಅಕ್ಷಯ್ ಪಾಠಕ ಇನ್ನಿತರರು ಉಪಸ್ಥಿತರಿದ್ದರು.