ಹುಬ್ಬಳ್ಳಿ: ಕಳೆದ ದಿ. 22ರಂದು ಅಚ್ಚವ್ವನ ಕಾಲೋನಿಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಪೋಟದಲ್ಲಿ ಇಂದು ಮತ್ತೋರ್ವ ಗಾಯಾಳು ಉಸಿರು ನಿಲ್ಲಿಸಿದ್ದು ತೀವ್ರ ಸ್ವರೂಪದಲ್ಲಿ ಸುಟ್ಟಿದ್ದ ಎಲ್ಲಾ ಎಂಟು ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಂತಾಗಿದೆ.
ಹುಬ್ಬಳ್ಳಿಯ ಇಸ್ಕಾನ್ ಮಂದಿರದಲ್ಲಿ ಕೆಲಸ ಮಾಡಿಕೊಂಡಿದ್ದ ಬಾರಕೇರ ಚಾಳನ ಪ್ರಕಾಶ ನಿಂಗಪ್ಪ ಬಾರಕೇರ (36) ಇಂದು ಬೆಳಗ್ಗೆ 6-30 ರ ಸುಮಾರಿಗೆ ಮೃತಪಟ್ಟಿದ್ದಾರೆ.
ನಿನ್ನೆ ಸೋಮವಾರ ಹೊಟೆಲ್ದಲ್ಲಿ ಕೆಲಸ ಮಾಡುತ್ತಿದ್ದ ತೇಜಸ್ ಸುತಾರೆ (26) ಮೃತ ಪಟ್ಟಿದ್ದನು.ತೀವ್ರವಾಗಿ ಸುಟ್ಟಿದ್ದ ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24). ಶಂಕರ ಚವ್ಹಾಣ(30) ಮತ್ತು ಮಂಜುನಾಥ ವಾಘ್ಮೋಡೆ ಈ ಮೊದಲು ಮೃತಪಟ್ಟವರಾಗಿದ್ದಾರೆ.
ಗಾಯಗೊಂಡವರ ಪೈಕಿ ವಿನಾಯಕ ಬಾರಕೇರ(೧೨) ಚೇತರಿಸಿಕೊಳ್ಳುತ್ತಿದ್ದಾನೆ. ಗಾಯಾಳುಗಳ ರಕ್ಷಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸೂಕ್ತ ಚಿಕಿತ್ಸೆ ನೀಡಲೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದಲೂ ತಜ್ಞ ವೈದ್ಯರನ್ನು ಕರೆಯಿಸಿದ್ದರು.ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ಈಗಾಗಲೇ ಘೋಷಿಸಿದೆ.