*ವಾರದ ಸಂತೆಗೆ ವ್ಯಾಪಾರಕ್ಕೆ ಹೊರಟವರು ಬಾರದ ಲೋಕಕ್ಕೆ*
ಯಲ್ಲಾಪುರ : ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ಕುಮಟಾಕ್ಕೆ ಹೊರಟಿದ್ದ ತರಕಾರಿ ತುಂಬಿದ್ದ ಲಾರಿ ಇಂದು ಬೆಳಗಿನ ಜಾವ ಅರಬೈಲ ಘಟ್ಟದ ಸಮೀಪದ ಗುಳ್ಳಾಪುರ ಬಳಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಪಲ್ಟಿಯಾಗಿ, ಅದರಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಬುಧವಾರ ಈ ಅವಘಡ ಸಂಭವಿಸಿದ್ದು 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತರಕಾರಿ ತುಂಬಿದ್ದ ಲಾರಿಯಲ್ಲಿ 25ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಕುಮಟಾದಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ಎಲ್ಲರೂ ತರಕಾರಿ ಸಾಗಿಸುತ್ತಿದ್ದು, ಬೆಳಗಿನ ಜಾವ ರಸ್ತೆಯಲ್ಲಿ ಮಂಜು ಮುಸುಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಶವಗಳನ್ನು ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ನಾರಾಯಣ್ ಭೇಟಿ ನೀಡಿ ನೀಡಿದ್ದಾರೆ.
ಫಯಾಜ್ ಜಮಖಂಡಿ(45) , ವಸಿಂ ಮುಡಗೇರಿ(35) , ಇಜಾಜ್ ಮುಲಾ(20), ಸಾದಿಕ್ಭಾಷಾ (30) , ಗುಲಾಂ ಹುಸೇನ ಜವಳಿ(40), ಇಮ್ತಿಯಾಜ್ ಮುಳಕೇರಿ(36), ಅಲ್ಪ್ರಾಜ್ ಮಂಡಕ್ಕಿ( 25), ಜಿಲಾನಿ ಜಕಾತಿ(25), ಅಸ್ಲಾಂ ಬೆಣ್ಣೆ(24) ಮೃತಪಟ್ಟವರಾಗಿದ್ದು ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.
ಟೈರ್ ಸ್ಪೋಟ – ನಾಲ್ಕು ಸಾವು : ರಾಯಚೂರ ಜಿಲ್ಲೆಯ ಸಿಂದನೂರ ತಾಲೂಕಿನಲ್ಲೂ ವಾಹನದ ಟೈರ ಸ್ಪೋಟಗೊಂಡು ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ನಿನ್ನೆ ತಡರಾತ್ರಿ ಮೃತ ಪಟ್ಟಿದ್ದಾರೆ.
ಎರಡೂ ಘಟನೆಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಸೂಕ್ತ ಪರಿಹಾರ ನೀಡುವುದಾಗಿ ಹೇಳಿದ್ದಾರೆ.