ಹುಬ್ಬಳ್ಳಿ : ನವಲಗುಂದ ಪಟ್ಟಣದ ಶ್ರೀ ರಾಮಲಿಂಗ ಕಾಮಣ್ಣನು ಇಷ್ಟಾರ್ಥ ಪುರುಷನಾಗಿ ಪೂಜೆಗೊಳ್ಳುತ್ತಿರುವ ಕಾಮದೇವನಾಗಿದ್ದು, ಹಿಂದೂ -ಮುಸ್ಲಿಂ ಬಾಂಧವರೆಲ್ಲರೂ ಸೇರಿಕೊಂಡು ಈ ಹಬ್ಬವನ್ನು ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ಆಚರಿಸುತ್ತಾರೆ. ಜಿಲ್ಲೆಯಷ್ಟೇ ಅಲ್ಲದೇ ನೆರೆಯ ರಾಜ್ಯಗಳಿಂದಲೂ ಭಕ್ತ ಸಾಗರವೇ ಹರಿದು ಬರುತ್ತದೆ.
ಮಾರ್ಚ್ 11ರಂದು ಇಲ್ಲಿನ ಕಾಮಣ್ಣ ಪ್ರತಿಷ್ಟಾಪನೆಗೊಳ್ಳಲಿದ್ದು ಭಕ್ತರ ದರ್ಶನಕ್ಕೆ ಲಭ್ಯವಾಗಲಿದೆ.ದಿ.14 ಹೋಳಿ ಹುಣ್ಣಿಮೆ, ಮಾ.15 ಶುಕ್ರವಾರ ದಿವಸ ಬಣ್ಣದಾಟ ನಡೆಯಲಿದೆ.ಅಂದು ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಮಲಿಂಗ ಕಾಮಣ್ಣ ಹಾಗೂ ವಿವಿಧ 14ಕಡೆಗಳಲ್ಲಿ ಪ್ರತಿಷ್ಠಾಪಿಸಿದ ವೈಶಿಷ್ಟ್ಯ ಪೂರ್ಣ ಕಾಮಣ್ಣಗಳು ರಗ್ಗ ಹಲಗಿ, ವಾಧ್ಯಮೇಳದೊಂದಿಗೆ ಮೆರವಣೆಗೆ ನಡೆಯಲಿದೆ. ಉಳಿದ ಕಾಮಣ್ಣಗಳ ಅಗ್ನಿಸ್ಪರ್ಶದ ನಂತರ ಇಷ್ಟಾರ್ಥ ಸಿದ್ದಿ ರಾಮಲಿಂಗ ಕಾಮಣ್ಣನ ದಹನವಾಗಲಿದೆ.
ಸಂತಾನವಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಲು ಬೆಳ್ಳಿಯ ತೊಟ್ಟಿಲು, ಕಂಕಣ ಬಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ, ಅನಾರೋಗ್ಯ ನಿವಾರಣೆಗೆ ಬೆಳ್ಳಿ ಕುದುರೆ, ಮನೆ ವಸತಿ ಇಲ್ಲದವರು ಛತ್ರಿ ಛಾಮರ ಸೇರಿದಂತೆ ಬೆಳ್ಳಿ ಸಾಮಗ್ರಿಗಳನ್ನು ತೆಗೆದುಕೊಂಡು ತಮ್ಮ ಹರಕೆಯನ್ನು ತೀರಿಸುವದು ವಿಶೇಷವಾಗಿದೆ.
ರಾಮಲಿಂಗ ಕಾಮಣ್ಣನಿಗೆ ಐತಿಹಾಸಿಕ ಹಿನ್ನೆಲೆಯಿದೆ. ನವಾಬರ ಆಡಳಿತಾವಧಿಯಲ್ಲಿ ಸಿದ್ದಿ ಪುರುಷನೊಬ್ಬ ವಿಶೇಷ ನಕ್ಷತ್ರ ದಿನದಂದು ವಿವಿಧ ಬಗೆಯ ಗಿಡಮೂಲಿಕೆ ಕಟ್ಟೆಗೆಗಳನ್ನು ಆಯ್ದು ತಂದು ಕಾಮಕಾಷ್ಠ ಮೂರ್ತಿ ರಚಿಸಲು ಸಿದ್ದನಾದ. ಇದೇ ವೇಳೆ 99 ಗಿಡಮೊಲಿಕೆ ಕಟ್ಟೆಗೆಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಂಕಲ್ಪಕ್ಕೆ ಮುಂದಾದ. ಆದರೆ ಇನ್ನೊಂದು ಗಿಡಮೊಲಿಕೆ ಕಟ್ಟಗೆ ಸಿಕ್ಕಿದ್ದರೆ ಆತನ ಲೌಕಿಕ ಸಂಕಲ್ಪದ ಮೂರ್ತಿಗೆ ಜೀವಕಳೆ ಬರುತ್ತಿತ್ತು ಎಂಬ ಪ್ರತೀತಿ ಇದೆ.
ವರ್ಷದಿಂದ ವರ್ಷಕ್ಕೆ ಕಾಮಣ್ಣನ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆಯಲ್ಲದೇ ಬಂದ ಭಕ್ತರಿಗೆ ಪ್ರಸಾದ ವಿತರಣೆ ಸಹ ಮಾಡಲಾಗುತ್ತಿದೆ.