ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ನಗರ ಕಮಿಷನರೇಟನ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ರೌಡಿಶೀಟರ್ ಗಳ ಮನೆಗಳ ಮೇಲೆ ಇಂದು ಬೆಳಗಿನ ಜಾವ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಒಟ್ಟು 1158 ರೌಡಿಶೀಟರ್ ಗಳ ಮನೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ದಾಳಿ ವೇಳೆ 80 ಮೊಬೈಲ್ ಗಳು, 14 ದ್ವಿಚಕ್ರ ವಾಹನಗಳು ಮತ್ತು 2 ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ದಾಳಿ ನಂತರ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರೇಡ್ ನಡೆಸಲಾಗಿದ್ದು, 737 ರೌಡಿಶೀಟರ್ ಗಳು, 20 ಡ್ರಗ್ಸ್ ಪೆಡ್ಲರ್ ಗಳು, 227 ಡ್ರಗ್ಸ್ ಬಳಕೆದಾರರು, 72 ಎಂಓಬಿಗಳು ಸೇರಿದಂತೆ ಒಟ್ಟು 1056 ಜನ ಪರೇಡ್ ನಲ್ಲಿ ಹಾಜರಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಠಾಣೆ ಸ್ಥಳಾಂತರ : ಶಿಥಿಲವಾಗಿದ್ದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯನ್ನು ಲಿಡ್ಕರ್ ಸಂಸ್ಥೆಯ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದ್ದು, ಪೂರ್ವ ಕ್ಷೇತ್ರದ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಉದ್ಘಾಟಿಸಿದರು. ಆಯುಕ್ತ ಶಶಿಕುಮಾರ್, ಡಿಸಿಪಿ ಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.