ಬೆಂಗಳೂರು: ಕನ್ನಡದ ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ.ಸರೋಜಾದೇವಿ (87) ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚತುರ್ಭಾಷಾ ನಟಿ ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
1938 ಜನವರಿ 7 ರಂದು ಜನಿಸಿದ ಅವರು ಕನ್ನಡ, ತಮಿಳು, ತೆಲುಗು ಹಿಂದಿ ಸೇರಿದಂತೆ ಚಿತ್ರರಂಗದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಆರು ದಶಕಗಳಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ಅವರು ಅಭಿನಯಿಸಿದ್ದರು.
ಮಹಾಕವಿ ಕಾಳಿದಾಸ (1955) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಲಗಾಲಿಟ್ಟ ಅವರು, ವರನಟ ರಾಜಕುಮಾರ್, ಕಲ್ಯಾಣ್ ಕುಮಾರ್ ಮುಂತಾದ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿದ್ದರು.
ಕನ್ನಡದ ಕಿತ್ತೂರು ಚೆನ್ನಮ್ಮ, ಅಣ್ಣಾ ತಮ್ಮ, ಭಕ್ತ ಕನಕದಾಸ, ಬಾಳೇ ಬಂಗಾರ, ನಾಗಕನ್ಯೆ, ಬೆಟ್ಟದ ಹೂವು, ಕಸ್ತೂರಿ ನಿವಾಸ, ಬಬ್ರುವಾಹನ, ಕಥಾಸಂಗಮ, ’ಅಮರ ಶಿಲ್ಪಿ ಜಕಣಾಚಾರಿ’, ’ಮಲ್ಲಮ್ಮನ ಪವಾಡ’ ಅಗ್ನಿ ಐ.ಪಿ.ಎಸ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ನಾಡೋಡಿ ಮನ್ನನ್, ಕರ್ಪೂರ ಕರಸಿ, ತಿರುಮಣಂ, ’ಪಾಟ್ಟಾಲಿ ಮುತ್ತು’, ’ಪಡಿಕಥ ಮೇಥೈ’, ’ಕಲ್ಯಾಣ ಪರಿಸು’, ಮುಂತಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದರು.ದಿಲೀಪ್ ಕುಮಾರ್ ಅವರ ಪೈಗಮ್, ’ಆಶಾ’, ’ಮೆಹಂದಿ ಲಗಾ ಕೆ ರಖನಾ’ ಮುಂತಾದ ಹಿಂದಿ ಚಿತ್ರದಲ್ಲೂ ಸರೋಜಾ ದೇವಿ ನಟಿಸಿದ್ದರು. ಕೊನೆಯದಾಗಿ ಅವರು 2019ರಲ್ಲಿ ಬಂದ ಪುನೀತ್ ರಾಜ್ಕುಮಾರ್ ಅವರ ನಟ ಸಾರ್ವಭೌಮದಲ್ಲಿ ನಟಿಸಿದ್ದರು.
ಚಿತ್ರರಂಗದಲ್ಲಿನ ಅಪಾರ ಸೇವೆಗೆ ಅವರಿಗೆ ಕರ್ನಾಟಕ, ತಮಿಳುನಾಡು, ಆಂಧ್ರ ಸರ್ಕಾರದ ಹತ್ತಾರು ಪ್ರಶಸ್ತಿಗಳು ಸಂದಿವೆ. ಪದ್ಮಶ್ರೀ ಪ್ರಶಸ್ತಿ , ಪದ್ಮಭೂಷಣ ಪ್ರಶಸ್ತಿ ಅಲ್ಲದೇ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದರು.