ಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಅವಳಿ ನಗರದ ರೌಡಿ ಶೀಟರ್ ಗಳಾದ ಸಾಗರ್ ಲಕ್ಕುಂಡಿ, 28 ವರ್ಷ, (ಹಳೆ ಹುಬ್ಬಳ್ಳಿ ಠಾಣೆ)ಲಕ್ಷ್ಮಣ್ ಅಲಿಯಾಸ್ ಗಭ್ಯಾ ಬಳ್ಳಾರಿ, 30 ವರ್ಷ, (ಬೆಂಡಿಗೇರಿ ಠಾಣೆ),ಮಂಜುನಾಥ್ ಅಲಿಯಾಸ್ ಸೈಂಟಿಸ್ಟ್ ಮಂಜ ಭಂಡಾರಿ 36 ವರ್ಷ(ಕೇಶ್ವಾಪುರ ಠಾಣೆ),ದಾವೂದ್ ನದಾಫ್, 32 ವರ್ಷ (ಶಹರ ಠಾಣೆ ಹುಬ್ಬಳ್ಳಿ)ಇವರ ವಿರುದ್ಧದ ಗೂಂಡಾ ಕಾಯ್ದೆ ಅಡಿ ಬಂಧನದ ಆದೇಶವನ್ನು ಉಚ್ಛ ನ್ಯಾಯಾಲಯದ ಸಲಹಾ ಮಂಡಳಿ ಎತ್ತಿ ಹಿಡಿದಿದ್ದು ಒಂದು ವರ್ಷದ ಅವಧಿಯವರೆಗೆ ಬಂಧನ ಆಜ್ಞೆಯನ್ನು ಮುಂದುವರಿಸಿ ಆದೇಶಿಸಿದೆ.
ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿ ಕಾನೂನು ವ್ಯವಸ್ಥೆ ಹದೆಗಡಿಸುತ್ತಿದ್ದ ಸೈಂಟಿಸ್ಟ್ ಮಂಜ್ಯಾ ಸಹಿತ ನಾಲ್ವರ ಚಟುವಟಿಕೆಗಳನ್ನು ನಿಯಂತ್ರಿಸಲು ಕಳೆದ ತಿಂಗಳು ಅವಳಿನಗರದ ಪೋಲಿಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ರವರು ಗೂಂಡಾ ಕಾಯ್ದೆ 1985 ಅಡಿಯಲ್ಲಿ ಒಂದು ವರ್ಷದ ಅವಧಿವರೆಗೆ ವಿವಿಧ ಕಾರಗೃಹಗಳಲ್ಲಿ ಇಡಲು ಬಂಧನ ಆಜ್ಞೆ ಹೊರಡಿಸಿದ್ದರು.
ಉಚ್ಛ ನ್ಯಾಯಾಲಯದ ಸಲಹಾ ಮಂಡಳಿಯು ರೌಡಿಶೀಟರ್ ಗಳ ವಿರುದ್ಧ ಹೊರಡಿಸಿದ್ದ ಗೂಂಡಾ ಕಾಯ್ದೆಯಡಿ ಬಂಧನ ಆದೇಶದ ವಿಚಾರಣೆಯನ್ನು ಕೈಗೊಂಡಿದ್ದು, ರೌಡಿ ಶೀಟರ್ ಗಳು ತಮಗೆ ನೀಡಿದ ಜಮೀನು ಷರತ್ತುಗಳನ್ನು ಮತ್ತು ಉತ್ತಮ ರೀತಿಯಲ್ಲಿ ಬದುಕಲು ನೀಡಿರುವ ಅವಕಾಶಗಳನ್ನು ಉಲ್ಲಂಘಿಸಿ ತಲೆಮರೆಸಿಕೊಂಡು ನಿರಂತರ ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಇವರುಗಳು ಮಾರಕವಾಗಿರುವುದರಿಂದ ಪೊಲೀಸ್ ಆಯುಕ್ತರು ಮಾಡಿರುವ ಆದೇಶವನ್ನು ಎತ್ತಿ ಹಿಡಿದಿದೆ.
ಪೊಲೀಸ್ ನಿರ್ದೇಶಕರು ಮತ್ತು ಮಹಾನಿರೀಕ್ಷಕರು ಬೆಂಗಳೂರು ರವರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರ ಕ್ರಮವನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.