ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ನಾಳೆ ಆಗಸ್ಟ್ 19 ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೆಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ಒಂದು ದಿನದ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಆದೇಶ ಹೊರಡಿಸಿದ್ದಾರೆ.
ಈ ಆಗಸ್ಟ್ 19 ರ ರಜಾ ದಿನವನ್ನು ಮುಂದಿನ ಸಾರ್ವತ್ರಿಕ ರಜಾ ದಿನಗಳಲ್ಲಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣಿಕೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶದಲ್ಲಿ ಅವರು ನಿರ್ದೇಶಿಸಿದ್ದಾರೆ. ನಾಳೆ 19ರಂದು ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ನೀಡಿದ್ದು, ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.ಆಗಸ್ಟ್ 20ರಂದು ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ವ್ಯಾಪಕ ಮಳೆ ಬೀಳುವ ನಿರೀಕ್ಷೆ ಇದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಯ ಪರಿಣಾಮದಿಂದ ಉಂಟಾದ ಅಲೆಗಳ ಅಬ್ಬರಕ್ಕೆ ಕಡಲತೀರಕ್ಕೆ ಬಂದು ಸಿಲುಕ್ಕಿದ್ದ ಇಂಡೋ-ಪೆಸಿಫಿಕ್ ಹಂಪ್ಬ್ಯಾಕ್ ತಳಿಯ ಡಾಲ್ಫಿನ್ ಮೀನನ್ನು ಕಾರವಾರ ತಾಲೂಕಿನ ದೇವಬಾಗ ಕಡಲತೀರದಲ್ಲಿ ಇಂದು ರಕ್ಷಣೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 12ರ ಸುಮಾರಿಗೆ ಡಾಲ್ಫಿನ್ ಮೀನಿನ ಮರಿ ಒದ್ದಾಡುತ್ತಿರುವುದು ಕಂಡು ಬಂದ ನಂತರ ಅಲ್ಲಿದ್ದ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸಿಬ್ಬಂದಿ ತಕ್ಷಣ ಬಂದು ಅದು ಪುನಃ ನೀರಿಗೆ ಹೋಗುವಂತೆ ಮಾಡಿದ್ದಾರೆ.