ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ನಾಳೆಯೂ ದಿ.20ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೆಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ಒಂದು ದಿನದ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶ ಹೊರಡಿಸಿದ್ದಾರೆ.
ನಿನ್ನೆ ಹೊರಡಿಸಿದ ಆದೇಶದಲ್ಲಿ ದಿ. 19ರಂದು ಮಂಗಳವಾರ ಮಾತ್ರ ಆದೇಶ ಹೊರಡಿಸಿದ್ದರು. ಇಂದೂ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ದಿ. 20ರ ರಜಾ ದಿನವನ್ನು ಮುಂದಿನ ಸಾರ್ವತ್ರಿಕ ರಜಾ ದಿನಗಳಲ್ಲಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣಿಕೆ ಮಾಡಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಆದೇಶದಲ್ಲಿ ಅವರು ನಿರ್ದೇಶಿಸಿದ್ದಾರೆ.
ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು ಹಲವೆಡೆ ಮನೆಗಳು ಕುಸಿದ ಬಗ್ಗೆ ವರದಿಯಾಗಿದೆ. ಬೆಳಗಾವಿಯಲ್ಲಿ ಸಹ ವರುಣನ ಅಬ್ಬರ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲೆಡೆ ಶಾಲಾ ಕಾಲೇಜುಗಳಿಗೆ ರಜೆಯನ್ನು ಅಲ್ಲಿನ ಜಿಲ್ಲಾಧಿಕಾರಿ ಘೋಷಿಸಿದ್ದಾರೆ.
ಶರಾವತಿಯ ಲಿಂಗನಮಕ್ಕಿ ಜಲಾಶಯದಿಂದ ಇಂದು ಮಂಗಳವಾರ ನೀರನ್ನು ಹೊರಕ್ಕೆ ಬಿಡಲಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ಒಟ್ಟು 15000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಮೊದಲು ಮೂರು ಗೇಟಗಳನ್ನು ತೆಗೆದು ನೀರನ್ನು ಹೊರಕ್ಕೆ ಕಳುಹಿಸಲಾಗಿತ್ತು. ನಂತರ 11 ಗೇಟ್ಗಳನ್ನು ತೆರೆದು ಒಟ್ಟು 15000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಲಿಂಗನಮಕ್ಕಿ ಜಲಾಶಯದ ತಗ್ಗು ಪ್ರದೇಶದಲ್ಲಿ ಶರಾವತಿ ನದಿಯ ಇಕ್ಕೆಲಗಳ ಪ್ರದೇಶದಲ್ಲಿರುವ ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿರುವ ತಳಮಟ್ಟದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.