ಹುಬ್ಬಳ್ಳಿ : ನೇಹಾ ಹಿರೇಮಠ್ ಕೊಲೆ ಆರೋಪಿ ಫಯಾಜ್ ಜಾಮೀನು ಅರ್ಜಿ ಇಂದು ಧಾರವಾಡ ಹೈಕೋರ್ಟ್ ನಲ್ಲಿ ತಿರಸ್ಕೃತಗೊಂಡಿದೆ.
ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆಯಲ್ಲಿ ಫಯಾಜ್ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಕೆಳ ಹಂತದ ನ್ಯಾಯಾಲಯದ ಆದೇಶ ಪರಿಷ್ಕರಿಸಿ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಆರೋಪಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಇಂದು ವಿಚಾರಣೆ ನಡೆದು ವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ನೇಹಾ ಪರ ವಕೀಲರಾದ ರಾಘವೇಂದ್ರ ಮುತಗೀಕರ, ಪ್ರಕಾಶ್ ಅಂದಾನಿಮಠ ಅರ್ಜಿ ತಿರಸ್ಕರಿಸಬೇಕೆಂದು ಮನವಿ ಮಾಡಿದ್ದರು.
ಇಂದಿನ ಹೈಕೋರ್ಟ್ ತೀರ್ಪು ನೇಹಾ ತಂದೆ ನಿರಂಜನ ಹಿರೇಮಠ ಹಾಗೂ ಕುಟುಂಬದವರಿಗೆ ಮತ್ತಷ್ಟು ನೆಮ್ಮದಿ ತಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯಲ್ಲಿ ಶ್ರೀ ರಾಮ್ ಸೇನೆಯ ರಾಷ್ಟ್ರೀಯ ಅಧ್ಯಕ್ಷರು ಪ್ರಮೋದ್
ಮುತಾಲಿಕ್ ಅವರು ಹೇಳಿಕೆ ನೀಡಿದ್ದು, ಈ ತೀರ್ಪು ಸ್ವಾಗತಾರ್ಹ, ನ್ಯಾಯಾಲಯ ಸರಿಯಾದ ಆದೇಶ ನೀಡಿದ್ದು ಆರೋಪಿಗೆ ಕಠಿಣ ಸಜೆ ಆಗಬೇಕಿದೆ ಎಂದು ಹೇಳಿದ್ದಾರೆ.
ನೇಹಾಳನ್ನು ಇಪ್ಪತ್ತೇಳು ಬಾರಿ ಇರಿದು ಸಾಯಿಸಿದ ಫಯಾಜ್ ಕಳೆದ ಒಂದು ವರ್ಷದ ಐದು ತಿಂಗಳಿಂದ ಧಾರವಾಡ ಕಾರಾಗೃಹದಲ್ಲಿ ಇದ್ದಾನೆ. ದಿ.6ರಂದು ವಿಚಾರಣೆ ವೇಳೆ ಟ್ರಯಲ್ ದಿನಾಂಕ ನಿಗದಿಯಾಗಲಿದೆ.