*176 ಅನಧಿಕೃತ ವಸತಿ ವಿನ್ಯಾಸಗಳಿಗೆ ನೋಟಿಸ್ : ಶಾಕೀರ ಸನದಿ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ( ಎಲ್.ಪಿ.ಎ) ಹುಬ್ಬಳ್ಳಿ ತಾಲ್ಲೂಕಿನ 13 ಗ್ರಾಮಗಳು, ಕಲಘಟಗಿ ತಾಲ್ಲೂಕಿನ 6 ಗ್ರಾಮಗಳು ಮತ್ತು ಧಾರವಾಡ ತಾಲ್ಲೂಕಿನ 27 ಗ್ರಾಮಗಳು ಸೇರಿದಂತೆ ಹೊಸದಾಗಿ 46 ಹಳ್ಳಿಗಳನ್ನು ಸೇರ್ಪಡೆ ಮಾಡಿ, ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಎಲ್ಲ ಹಳ್ಳಿಗಳನ್ನು ನಿಯಮಾನುಸಾರ ಅಭಿವೃದ್ಧಿ ಪಡಿಸಿ, ಅಗತ್ಯ ಸೌಕರ್ಯಗಳನ್ನು ನಿರ್ಮಿಸಿ, ಅವಳಿ ನಗರದ ನಾಗರಿಕರಿಗೆ ಸುಸಜ್ಜಿತ ಬಡಾವಣೆ, ನಿವೇಶನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಅವರು ಹೇಳಿದರು.
ಪ್ರಾಧಿಕಾರದ ಸಭಾಂಗಣದಲ್ಲಿ ಸದಸ್ಯರು , ಅಧಿಕಾರಿಗಳ ಜತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗಾಗಲೇ ಹುಬ್ಬಳ್ಳಿ ಧಾರವಾಡ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ತಾಲ್ಲೂಕಿನ 21 ಗ್ರಾಮಗಳು ಹಾಗೂ ಧಾರವಾಡ ತಾಲ್ಲೂಕಿನ 25 ಗ್ರಾಮಗಳು ಸೇರಿದಂತೆ ಒಟ್ಟು 46 ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿತ್ತು. ಈಗ ಪ್ರಸ್ತುತ ಸರಕಾರದ ಅಧಿಸೂಚನೆ ಪ್ರಕಾರ ಪ್ರಾಧಿಕಾರದ ವ್ಯಾಪ್ತಿಗೆ ಹೊಸದಾಗಿ 46 ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ ಎಂದರು.
ಒಟ್ಟಾರೆಯಾಗಿ 92 ಗ್ರಾಮಗಳು ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಯಾಗಿವೆ ಎಂದು ಅವರು ತಿಳಿಸಿದರು.
ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಒಳಪಡುವ ಪ್ರತಿ ಹಳ್ಳಿಗೂ ರಿಂಗ್ ರೋಡ್ ನಿರ್ಮಿಸಲಾಗುತ್ತದೆ. ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಸಹ ಹಾಕಿಕೊಳ್ಳಲಾಗಿದೆ. ಇವುಗಳ ಜೊತೆಗೆ ಹುಬ್ಬಳ್ಳಿ ಮತ್ತು ಧಾರವಾಡ ನಗರದ ಸುತ್ತಮುತ್ತಲಿನ ಹಳ್ಳಿಗಳು ಸಹ ಅಭಿವೃದ್ಧಿ ಆಗಬೇಕೆಂಬ ಸದುದ್ದೇಶ ಹೊಂದಲಾಗಿದೆ.
ನಾಗರಿಕರಿಗೆ ಕಡಿಮೆ ಬೆಲೆಯಲ್ಲಿ ನಿವೇಶನಗಳು ದೊರೆಯುವಂತೆ ಆಗಬೇಕು ಎಂದು ಸನದಿ ತಿಳಿಸಿದರು.
ಸ್ಥಳೀಯ ಯೋಜನಾ ಪ್ರದೇಶದಲ್ಲಿ ಕೈಗಾರಿಕೆ ಮತ್ತು ನಗರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಗುಜರಾತ್, ಕಟಕ, ಭುವನೇಶ್ವರ, ಚಂಡಿಗಡ, ನೊಯ್ಡಾ ನಗರಗಳಿಗೆ ತೆರಳಿ, ನಗರ ಮೂಲಸೌಕರ್ಯ, ಬಡಾವಣೆ ನಿರ್ಮಾಣದ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ. ಈ ಕುರಿತು ನಮ್ಮಲ್ಲಿಯೂ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ಅವಳಿ ನಗರದಲ್ಲಿ ನಿಯಮಬಾಹಿರವಾಗಿ ಅಭಿವೃದ್ಧಿಪಡಿಸಿದ್ದ ಸುಮಾರು 176 ಅನಧಿಕೃತ ಲೇಔಟ್ ಗಳಿಗೆ ನೋಟೀಸ್ ನೀಡಲಾಗಿದೆ. ಅಕ್ರಮ ಲೇಔಟ್ ನಿರ್ಮಾಣ ತಡೆಯಲು ಕ್ರಮ ವಹಿಸಲಾಗುವುದು. ಕುಸುಗಲ್ ಗ್ರಾಮದಿಂದ ಧಾರವಾಡ ಹೈಕೋರ್ಟ್ ವರೆಗೆ ಹೊರ ವರ್ತುಲ್ ರಸ್ತೆ ( ಔಟರ್ ರಿಂಗ್ ರೋಡ್ ) ನಿರ್ಮಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಶಕೀರ ಸನದಿ ತಿಳಿಸಿದರು.
ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ಅವರು ಮಾತನಾಡಿ, ಈ ಹಿಂದೆ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟಿರುವ ಹಳ್ಳಿಗಳಲ್ಲಿ ಸುಸಜ್ಜಿತ ಬಡಾವಣೆಗಳ ಅಭಿವೃದ್ಧಿಗೆ ರೂಪಿಸಿದ್ದ, ಮಾಸ್ಟರ್ ಪ್ಲಾನ್ ಅನ್ನು ಸಮಗ್ರವಾಗಿ ಪರಿಷ್ಕರಿಸಿ, ಸರಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಮಾಸ್ಟರ್ ಪ್ಲಾನ್ ಅನ್ನು ಈಗಿನ ಅಗತ್ಯಕ್ಕೆ ತಕ್ಕಂತೆ ಸರಿಪಡಿಸಿಕೊಳ್ಳಲಾಗುತ್ತಿದೆ ಎಂದರು.
ಸ್ಥಳೀಯ ಯೋಜನಾ ಪ್ರದೇಶದ ಹಳ್ಳಿಗಳ ರಸ್ತೆಗಳನ್ನು 15 ರಿಂದ 18 ಮೀಟರ್ ವರೆಗೆ ಅಗಲೀಕರಣ ಮಾಡಲಾಗುವುದು. ಈ ಮೊದಲು ಸರ್ಕಾರದ ಜಾಗದಲ್ಲಿ ಲೇಔಟ್ ನಿರ್ಮಿಸಲಾಗುತ್ತಿತ್ತು. ಆದರೆ ಈಗ ಸರ್ಕಾರದ ಜಾಗಗಳು ಸಿಗುತ್ತಿಲ್ಲ. ಇದನ್ನು ಬಳಸಿಕೊಂಡು, ಖಾಸಗಿಯವರು ಜನರಿಗೆ ಹಲವಾರು ಆಸೆ ಆಮಿಷಗಳನ್ನು ತೋರಿಸಿ ಸೈಟ್ ಖರೀದಿಸುವಂತೆ ಮನವೊಲಿಸುತ್ತಾರೆ. ನಿಯಮಾನುಸಾರ ಲೇಔಟ್ ಪೂರ್ಣಗೊಳಿಸದೆ, ಅಪೂರ್ಣ ಕಾಮಗಾರಿ ಮಾಡಿ, ನಾಗರಿಕರಿಗೆ ಹಾನಿ ಉಂಟು ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯರಾದ ಫೈಜ್ ಅಹ್ಮದ್ ಕಲಘಟಗಿ, ಮಂಜುನಾಥ ಎಲ್.ಭೋವಿ, ವಿಜಯಾನಂದ ಶೆಟ್ಟಿ, ಸುನೀತಾ ಹುರಕಡ್ಲಿ, ನಗರ ಯೋಜಕ ಸದಸ್ಯ ಮಹಾಂತೇಶ ಪೂಜಾರ, ಪ್ರಾಧಿಕಾರದ ಇಂಜನೀಯರಗಳಾದ ಬಸವರಾಜ ದೇವಗಿರಿ, ಮುಕುಂದ ಜೋಶಿ, ಮೌನೇಶ್ ಬಡಿಗೇರ,ಪ್ರಾಧಿಕಾರದ ಕಾರ್ಯದರ್ಶಿ ನರಸಪ್ಪನವರ, ವ್ಯವಸ್ಥಾಪಕ ಮಂಜುನಾಥ ಗೂಳಪ್ಪನವರ ಇದ್ದರು.
*ಸೇರ್ಪಡೆ ಆಗಿರುವ ಮೂರು ತಾಲೂಕಿಗೆ ಒಳಪಟ್ಟ ಹೊಸ ಗ್ರಾಮಗಳು.*
*ಹುಬ್ಬಳ್ಳಿ ತಾಲೂಕು:* ರೇವಡಿಹಾಳ,ದೇವರಗುಡಿಹಾಳಪರಸಾಪೂರ, ಬುಡ್ನಾಳ, ಮಾವನೂರ, ಬುಡರಸಿಂಗಿ, ಸಿದ್ದಾಪೂರ, ಮುರಾರಹಳ್ಳಿ, ಅದರಗುಂಚಿ, ಹಳ್ಳಾಳ, ಶಹರ ವೀರಾಪೂರ, ಕುಸುಗಲ್ಲ, ಸುಳ್ಳ ಗ್ರಾಮಗಳು.
*ಕಲಘಟಗಿ ತಾಲೂಕು:*
ದೇವಲಿಂಗಿಕೊಪ್ಪ, ದಾಸನೂರ, ದುಮ್ಮವಾಡ, ಕುರಣಕೊಪ್ಪ, ಕಾಡಣಕೊಪ್ಪ, ಚಳಮಟ್ಟಿ ಗ್ರಾಮಗಳು.
*ಧಾರವಾಡ ತಾಲೂಕು:* ಕೋಟೂರ, ಅಗಸನಹಳ್ಳಿ, ಶಿಂಗನಹಳ್ಳಿ, ಹೆಗ್ಗೇರಿ, ವರವನಾಗವಾಲಿ, ಚಿಕ್ಕಮಲ್ಲಿಗವಾಡ, ದಡ್ಡಿಕಮಲಾಪೂರ, ಮಂಡಿಹಾಳ, ಮುಗದ, ಕ್ಯಾರಕೊಪ್ಪ, ಜಂಜಲ (ಜುಂಜಲಕಟ್ಟಿ), ಬಾಡ, ಬೆನಕನಕಟ್ಟಿ, ಮನಗುಂಡಿ, ನಾಯಿಕನಹುಲಿಕಟ್ಟಿ, ಶಿವಳ್ಳಿ, ಮಾರಡಗಿ, ನವಲೂರ ತಡೆಬಿಳ, ಅಲ್ಲಾಪೂರ, ಗೊಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ, ಕಮಲಾಪೂರ, ದಾಸನಕೊಪ್ಪ, ದೇವಗಿರಿ ಎಂ ನರೇಂದ್ರ, ಗೋವನಕೊಪ್ಪ ಎಂ ನರೇಂದ್ರ ಮತ್ತು ನೀರಲಕಟ್ಟಿ ಗ್ರಾಮಗಳು.