ಬೆಂಗಳೂರು : ಕನ್ನಡದ ಪ್ರಮುಖ ಕಾದಂಬರಿಕಾರ, ಹಿರಿಯ ಚಿಂತಕ ಎಲ್.ಎಲ್.ಭೈರಪ್ಪ (94) ಇಂದು ವಿಧಿವಶರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನ 2.38ರ ಸುಮಾರಿಗೆ ನಿಧನ ಹೊಂದಿದರು. ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ತಿಂಗಳಿನಿಂದ ಬೆಂಗಳೂರು ನಗರದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರು 1934ರ ಜುಲೈ 26ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ಆಧುನಿಕ ಸಾಹಿತ್ಯದ ಪ್ರಮುಖ ಕಾದಂಬರಿಕಾರರಾದ ಭೈರಪ್ಪ ಕನ್ನಡದಲ್ಲಿ ಅವರು ಬರೆದ ಕಾದಂಬರಿ ಅತಿ ಹೆಚ್ಚು ಮಾರಾಟ ಕಂಡಿದ್ದಲ್ಲದೇ ಹಿಂದಿ, ಮರಾಠಿ, ಮತ್ತು ಆಂಗ್ಲ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ.
ಅವರು ಬರೆದ ಪ್ರಮುಖ ಕನ್ನಡ ಕಾದಂಬರಿಗಳಲ್ಲಿ ‘ಆವರಣ’, ‘ಪರ್ವ’, ‘ಗೃಹಭಂಗ’, ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ಮತಾಡನ’, ‘ನಾಯಿ ನೆರಳು’, ‘ತಂತು’, ಮತ್ತು ‘ಸಾರ್ಥ’ ಸೇರಿವೆ.
ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆ ಪರಿಗಣಿಸಿ 2010ರಲ್ಲಿ ಸರಸ್ವತೀ ಸಮ್ಮಾನ್, 1975ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2023ರಲ್ಲಿ ಪದ್ಮಭೂಷಣ ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿಗಳು ಅರಸಿ ಬಂದಿವೆ. ಡಾ. ಎಸ್. ಎಲ್. ಭೈರಪ್ಪ ಪ್ರತಿಷ್ಠಾನ (ರಿ) ಕೆಲವು ದಿನಗಳ ಹಿಂದೆ ಉದ್ಘಾಟನೆಗೊಂಡಿತ್ತು.
ನಾಡಿದ್ದು ಶುಕ್ರವಾರ ಮೈಸೂರಿನಲ್ಲಿ ಅವರು ಅಂತ್ಯ ಸಂಸ್ಕಾರ ನಡೆಯಲಿದೆ ಎನ್ನಲಾಗಿದೆ. ನಾಳೆ ಮಧ್ಯಾಹ್ನದವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ
ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಇವರು ಒಬ್ಬರೆಂದು ಪರಿಗಣಿಸಲಾಗಿದ್ದು.ಅವರ ಕಾದಂಬರಿಗಳು ವಿಷಯ, ರಚನೆ ಮತ್ತು ಪಾತ್ರಗಳ ನಿರೂಪಣೆಯಲ್ಲಿ ವಿಶಿಷ್ಟವಾಗಿವೆ.
ಭೈರಪ್ಪನವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ ಸಾಹಿತ್ಯಕ ವಲಯ ಕಂಬನಿ ಮಿಡಿದಿದೆ.