ಬೆಂಗಳೂರು:ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ನಡೆಸುತ್ತಿರುವ ಜಾತಿ ಗಣತಿಗೆ ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ತೀರ್ಮಾನ ಕೈಗೊಂಡಿದೆ. ಕರ್ನಾಟಕ ಹೈಕೋರ್ಟ್ ಗುರುವಾರ ಪ್ರಸಕ್ತ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಮಹತ್ವದ ಆದೇಶ ಪ್ರಕಟಿಸಿತು.
ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್, ಕೆಲವು ನಿಬಂಧನೆಗಳನ್ನು ವಿಧಿಸಿ ಸರ್ಕಾರಕ್ಕೆ ಸಮೀಕ್ಷೆ ಮುಂದುವರಿಸಲು ಅವಕಾಶ ನೀಡಿ ಅರ್ಜಿದಾರರ ಮನವಿಯನ್ನು ತಳ್ಳಿಹಾಕಿತು. ಹೈಕೋರ್ಟ್ ಸರ್ಕಾರ ಕೈಗೊಂಡಿರುವ ಸಮೀಕ್ಷಾ ಪ್ರಕ್ರಿಯೆಗೆ ಅಡ್ಡಿಯಿಲ್ಲವೆಂದು ಹೇಳಿದೆ.
ಸಮೀಕ್ಷಾ ಕಾರ್ಯ ಮುಂದುವರಿಯಬಹುದಾದರೂ, ಡೇಟಾ ಸಂಗ್ರಹಣೆ, ಸಂರಕ್ಷಣೆ ಹಾಗೂ ಉಪಯೋಗದ ಬಗ್ಗೆ ವೈಜ್ಞಾನಿಕತೆ, ಗೌಪ್ಯತೆ ಮತ್ತು ನಿಷ್ಠೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ ಎರಡನೇ ವಾರಕ್ಕೆ ಮುಂದೂಡಲಾಗಿದೆ.ಕಳೆದ ಎರಡು ಮೂರು ದಿನಗಳಿಂದ ತೀರ್ಪನ್ನು ಎಲ್ಲರೂ ಎದುರು ನೋಡುತ್ತಿದ್ದರು.