ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವತಿಯಿಂದ ರಾಜ್ಯೋತ್ಸವದಂಗವಾಗಿ ನೀಡಲಾಗುವ ಧೀಮಂತ ಪ್ರಶಸ್ತಿಯ ಪಟ್ಟಿ ಈ ಬಾರಿ ಶತಕ ದಾಟಿ 129ಕ್ಕೆ ಬಂದು ನಿಂತಿದೆ. ಸಾಧಕರಿಗೆ ನೀಡಲಾಗುವ ಪಟ್ಟಿ ಕೊನೆಗೂ ಇಂದು ಸಾಯಂಕಾಲದ ವೇಳೆಗೆ ಗಜಪ್ರಸವವಾಗಿ ಹೊರ ಬಿದ್ದಿದೆ.

ರಾಜ್ಯ ಸರ್ಕಾರ 70 ಜನರಿಗೆ ರಾಜ್ಯ ಮಟ್ಟದಲ್ಲಿ ರಾಜ್ಯ ಪ್ರಶಸ್ತಿ ನೀಡುವಂತೆ 70 ಜನರಿಗೆ ನೀಡಲಾಗುವುದೆಂದು ಮೊದಲೆ ಹೇಳಲಾಗಿದ್ದರೂ ಅಂತಿಮವಾಗಿ ಮತ್ತೆ 59 ಜನರು ಹೆಚ್ಚುವರಿಯಾಗಿ ಸೇರ್ಪಡೆಯಾಗಿ 129 ಜನರನ್ನು ಆಯ್ಕೆ ಮಾಡಲಾಗಿದೆ. ನಾಳೆ ಇಂದಿರಾ ಗಾಜಿನ ಮನೆಯಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
23 ಕ್ಷೇತ್ರಗಳ ಸಾಧಕರನ್ನು ಗುರುತಿಸಿ ನೀಡಲಾಗಿದ್ದು ಪತ್ರಿಕೋದ್ಯಮದಲ್ಲಿ 14ಜನರಿಗೆ, ಪೌರಕಾರ್ಮಿಕ ವಿಭಾಗದಲ್ಲಿ ಇಬ್ಬರು, ಸಾಹಿತ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತಲಾ ಒಂಬತ್ತು ಮಂದಿ, ಕ್ರೀಡಾ ಕ್ಷೇತ್ರದಲ್ಲಿ ಐವರು,ರಂಗ ಕ್ಷೇತ್ರದಲ್ಲಿ ಇಬ್ಬರು, ಸಂಗೀತ ( 4), ಚಿತ್ರಕಲೆ ( 4), ಜಾನಪದ ಮತ್ತು ಕೃಷಿ ಇಬ್ಬರು, ಶಿಕ್ಷಣ ಕ್ಷೇತ್ರದಲ್ಲಿ ಎಂಟು ಮಂದಿ, ಕೈಗಾರಿಕೆ ವಿಭಾಗದಲ್ಲಿ ಮೂವರು, ಯೋಗ ಕ್ಷೇತ್ರದಲ್ಲಿ ನಾಲ್ವರು,ಛಾಯಾಗ್ರಹಣದಲ್ಲಿ ಒಬ್ಬರು, ವಿಶೇಷ ಚೇತನರು ಮೂವರು, ಎನ್.ಜಿ.ಓ ಸಂಘ ಸಂಸ್ಥೆಗಳ ಕೋಟಾದಲ್ಲಿ ನಾಲ್ವರು, ಮೂವರು ಸಂಶೋಧಕರು, ಸೇವಾಕ್ಷೇತ್ರದಲ್ಲಿ ಏಳು ಮಂದಿ, ಸಾಮಾಜಿಕ ವಿಭಾಗದಲ್ಲಿ ಆರು, 27 ವಿಶೇಷ ಸಾಧಕರು, ಐವರು ಪ್ರತಿಭಾವಂತ ಮಕ್ಕಳು, ಇಬ್ಬರು ಕನ್ನಡ ಪರ ಹೋರಾಟಗರರಿಗೆ ನೀಡಲಾಗಿದೆ ಎಂದು ಧೀಮಂತ ಸನ್ಮಾನ ಸಮಿತಿ ಅಧ್ಯಕ್ಷ ಉಪ ಮೇಯರ್ ಸಂತೋಷ ಚವ್ಹಾಣ, ಸದಸ್ಯರುಗಳಾದ ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ, ರಾಜಾರಾಂ ಮನಿಕುಂಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




