*ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ : ಅವಿರೋಧ ಆಯ್ಕೆ*
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೨೪ನೇ ಅವಧಿಗೆ ವಿವಿಧ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯ ಚುನಾವಣೆ ಇಂದು ಮಧ್ಯಾಹ್ನ ನಡೆದು ಹಣಕಾಸು ಸ್ಥಾಯಿ ಸಮಿತಿಗೆ ಮೀನಾಕ್ಷಿ ವಂಟಮೂರಿ, ಆರೋಗ್ಯ ಸ್ಥಾಯಿ ಸಮಿತಿಗೆ ಮಹದೇವಪ್ಪ ನರಗುಂದ, ನಗರ ಯೋಜನಾ ಸಮಿತಿಗೆ ಶೀಲಾ ಕಾಟ್ಕರ್, ಲೆಕ್ಕ ಸ್ಥಾಯಿ ಸಮಿತಿಗೆ ಸುರೇಶ ಬೇದರೆ
ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮಪತ್ರ ವಿತರಣೆ, ಸ್ವೀಕೃತಿ ನಂತರ ಸಂಜೆ ಐದು ಗಂಟೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಾಲ್ವರೂ ಅವಿರೋಧವಾಗಿ ಆಯ್ಕೆಯಾದರು ಎಂದು ಅಧಿಕೃತವಾಗಿ ಪ್ರಕಟಿಸಲಾಯಿತು.

ಎಲ್ಲ ಸ್ಥಾಯಿ ಸಮಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಮುಂದುವರಿದಿದ್ದು ಕೇಸರಿ ಪಡೆಯ ನಾಲ್ವರು ಹಾಗೂ ಕೈ ಪಾಳೆಯದ ಮೂವರು ಸದಸ್ಯರು ಇದ್ದಾರೆ.
ಮಹತ್ವದ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಆಫೀಲುಗಳ ಸ್ಥಾಯಿ ಸಮಿತಿ ಪಟ್ಟ ಮೀನಾಕ್ಷಿ ವಂಟಮೂರಿ ಅಲಂಕರಿಸಿ ಬಜೆಟ್ ಮಂಡನೆ ಮಾಡುವ ಅವಕಾಶ ಗಿಟ್ಟಿಸಿಕೊಂಡರು.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿಗೆ ಬಿಜೆಪಿಯ ಎಂ.ವೈ.ನರಗುಂದ
ಆಯ್ಕೆಯಾಗಿದ್ದಾರೆ . ಕಳೆದ ಮೂರು ಅವಧಿ ಇದೇ ಸಮಿತಿಯ ಸದಸ್ಯರಾಗಿದ್ದ ಇವರಿಗೆ ಈ ಬಾರಿ ಅಧ್ಯಕ್ಷ ಖುರ್ಚಿ ಲಭಿಸಿದೆ.
ಸುಮಾರು ಹದಿನೇಳು ವರ್ಷಗಳ ನಂತರ ಪರಿಶಿಷ್ಠ ಸಮುದಾಯದವರಿಗೆ ಈ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆತಿದೆ. ಈ ಹಿಂದೆ ಶಿವಣ್ಣ ಹಿರೇಕೆರೂರ ಈ ಸ್ಥಾನ ಅಲಂಕರಿಸಿದ್ದರು.

ನಗರಯೋಜನಾ ಮತ್ತು ಅಭಿವೃದ್ದಿ ಸಮಿತಿಗೆ ಶೀಲಾ ಮಂಜುನಾಥ ಕಾಟ್ಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು
ಇತ್ತೀಚೆಗೆ ಮೇಯರ್ ಸ್ಥಾನದಿಂದ ವಂಚಿತರಾದ ಪೂರ್ವ ಕ್ಷೇತ್ರದ ಶೀಲಾ ಕಾಟ್ಕರ್ ಗೆ ಪಟ್ಟ ಲಭಿಸಿದೆ .ಖಚಿತವಾಗಿದೆ. ಈ ಸ್ಥಾನಕ್ಕೆ ಪಶ್ಚಿಮ ಕ್ಷೇತ್ರದ ಆನಂದ ಯಾವಗಲ್ ಸಹ ಆಕಾಂಕ್ಷಿಯಾಗಿದ್ದರಲ್ಲದೇ ಶಾಸಕ ಅರವಿಂದ ಬೆಲ್ಲದ ಸಹ
ಯತ್ನ ನಡೆಸಿದ್ದರು.
ಲೆಕ್ಕಗಳ ಸ್ಥಾಯಿ ಸಮಿತಿ ಅಧಿಕಾರ ಸುರೇಶ ಬೇದರೆಯವರಿಗೆ ದಕ್ಕಿದೆ. ಮೇಯರ್ ಜ್ಯೋತಿ ಪಾಟೀಲ್ ಹಾಗೂ ಉಪಮೇಯರ್ ಸಂತೋಷ್ ಚವ್ಹಾಣ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.



