*ಧಾರವಾಡದಲ್ಲೂ ಕಾರ್ಯ ನಿರ್ವಹಿಸಿದ್ದ ಜನಾನುರಾಗಿ ಅಧಿಕಾರಿ*
ಕಲಬುರ್ಗಿ : ಇನ್ನೋವಾ ಕಾರೊಂದು ಉರುಳಿ ಬಿದ್ದ ಪರಿಣಾಮ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಇಂದು ಸಾಯಂಕಾಲ ಸಂಭವಿಸಿದೆ.

ಪ್ರಸಕ್ತ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಬೀಳಗಿ (51) ಹಾಗೂ ಇವರ ಸಹೋದರ ಸಂಬಂಧಿಕರಾದ ಶಂಕರ ಬೀಳಗಿ (55) ಹಾಗೂ ಈರಣ್ಣ ಬೀಳಗಿ (53) ಮೃತಪಟ್ಟಿದ್ದಾರೆ.
ಈರಣ್ಣ ಸಿರಸಂಗಿ ಎನ್ನುವರು ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮಹಾಂತೇಶ ಅವರು ತಮ್ಮ ಸಂಬಂಧಿಕರ ಮದುವೆಗೆಂದು ವಿಜಯಪುರದಿಂದ ಕಲಬುರಗಿಗೆ ಕಾರಿನಲ್ಲಿ ಹೊರಟಾಗ ಕಾರಿನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಅವಘಡ ಸಂಭವಿಸಿದೆ. ಸ್ಥಳದಲ್ಲಿಯೇ ಶಂಕರ ಬೀಳಗಿ ಮತ್ತು ಈರಣ್ಣ ಬೀಳಗಿ ಮೃತಪಟ್ಟರೆ, ಗಾಯಗೊಂಡಿರುವ ಮಹಾಂತೇಶ ಬೀಳಗಿ ಮತ್ತು ಈರಣ್ಣ ಸಿರಸಂಗಿ ಮತ್ತು ಚಾಲಕನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಹಾಂತೇಶ ಬೀಳಗಿಮೃತ ಪಟ್ಟಿದ್ದಾರೆ.

ಮಹಾಂತೇಶ ಬೀಳಗಿ ಈ ಹಿಂದೆ ಧಾರವಾಡದಲ್ಲಿ ಎಡಿಸಿಯಾಗಿ, ಉಪ ವಿಭಾಗಾಧಿಕಾರಿಯಾಗಿ ತದನಂತರ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಡತನದಿಂದ ಬಂದು ಉನ್ನತ ಹುದ್ದೆ ಏರಿದ ಇವರು ಜನಾನುರಾಗಿ ಅಧಿಕಾರಿ ಆಗಿದ್ದರು.



