ರಾಮಚಂದ್ರರಾವ್ ರಾಸಲೀಲೆ ವಿಡಿಯೋ ಫುಲ್ ವೈರಲ್ – ಸರ್ಕಾರಕ್ಕೆ ಮುಜುಗರ
ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ, ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರರಾವ್ ಅವರು ಕಚೇರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕೂಡಲೇ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ.

ರಾಮಚಂದ್ರರಾವ್ ಅವರು ಖಾಕಿ ಸಮವಸ್ತ್ರದಲ್ಲಿರುವಾಗಲೇ ತಮ್ಮ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಬ್ಬಿಕೊಂಡ ವಿಡಿಯೋ ವೈರಲ್ ಆಗಿದ್ದು, ಇದು 1 ವರ್ಷದ ಹಿಂದೆ ಸೆರೆಯಾಗಿದ್ದು ಎನ್ನಲಾಗುತ್ತಿದೆ.
ಕುಂದಾನಗರಿ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ವಿಡಿಯೋ ಬಗ್ಗೆ ನನಗೆ ಬೆಳಗ್ಗೆಯಷ್ಟೇ ಗೊತ್ತಾಗಿದೆ. ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿದ್ದೇನೆ ಎಂದರು.
ಈ ಹಿಂದೆ ಮಲಮಗಳು, ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿಯಾಗಿದ್ದಾರೆ ಎಂಬ ಆರೋಪ ಮೇಲೆ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ನಂತರ ಅವರನ್ನು ರಾಜ್ಯ ಸರ್ಕಾರ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಮರುನೇಮಕ ಮಾಡಿತ್ತು.ಈಗ ಸರ್ಕಾರಕ್ಕೆ ರಾಸಲೀಲೆ ವಿಡಿಯೋ ವೈರಲ್ ಆಗುತ್ತಲೇ ಮತ್ತೆ ಮುಜುಗರ ಉಂಟು ಮಾಡಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ, ರಾಮಚಂದ್ರರಾವ್ ಅವರು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಭೇಟಿ ಮಾಡಲು ಬಂದರಾದರೂ ಭೇಟಿಗೆ ಸಚಿವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
“ಇದು ಹೇಗೆ ಮತ್ತು ಯಾವಾಗ ನಡೆಯಿತು, ಯಾರು ಅದನ್ನು ಮಾಡಿದ್ದಾರೆಂದು ನಾನು ಯೋಚಿಸುತ್ತಿದ್ದೇನೆ. ಈ ಯುಗದಲ್ಲಿ ಏನು ಬೇಕಾದರೂ ಮಾಡಬಹುದು.
ನನ್ನ ವಿರುದ್ಧ ಷಡ್ಯಂತ್ರ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ್ದಾರೆ ಎಂದು ರಾಮಚಂದ್ರರಾವ್ ಹೇಳಿದ್ದಾರೆ.
“ಇದರಿಂದ ನನಗೆ ಆಘಾತವಾಗಿದೆ. ಇದೆಲ್ಲವೂ ಕಟ್ಟುಕಥೆ, ಸುಳ್ಳು ವಿಡಿಯೋ ಎಂದರು. ಅಲ್ಲದೆ ಮುಂದಿನ ಕ್ರಮದ ಬಗ್ಗೆ ಕೇಳಿದಾಗ, ಅವರು ತಮ್ಮ ವಕೀಲರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ.



