*ಭುವನ ಸುಂದರಿ ಮುಡಿಗೇರಿಸಿಕೊಂಡ ಬಹುಮುಖ ಪ್ರತಿಭೆಯ ಕನ್ನಡತಿ ನಾಟ್ಯಕ್ಕೂ ಸೈ, ನಟನೆಗೂ ಜೈ!*
ಹುಬ್ಬಳ್ಳಿ: ಅಮೇರಿಕದ ಪ್ಲೋರಿಡಾದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ವೈದ್ಯೆಯೊಬ್ಬಳು ಭುವನಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರೆಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಸುಮಾರು 40 ದೇಶಗಳ ಬೆಡಗಿಯರ ನಡುವಣ ಪೈಪೋಟಿಯಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡವರು ಶಿರಸಿ ಮೂಲದ ಮುಂಡಿಗೇಸರದವರಾದರೂ ಅಕ್ಷರಶಃ ಹುಬ್ಬಳ್ಳಿಯವರೇ ಆಗಿರುವ ಡಾ.ಶೃತಿ ಹೆಗಡೆ.
ಕುಚುಪುಡಿ, ಭರತನಾಟ್ಯ, ಕಥಕ್ ನಾಟ್ಯ ಪ್ರವೀಣೆ ಅಲ್ಲದೇ ಕ್ಯಾಲಿಗ್ರಫಿ ಪೇಂಟಿಂಗ್, ಎರಡೂ ಕೈಗಳ ಮೂಲಕ ಒಮ್ಮೆಲೇ ಬರೆಯಬಲ್ಲ ಬಹುಮುಖ ಪ್ರತಿಭೆಯ ಶೃತಿ ಮಿಸ್ ಯುನಿವರ್ಸಲ್ ಪೆಟಿಟ್ ( ಕಡಿಮೆ ಎತ್ತರದ ಯುವತಿಯರಿಗೆ ನಡೆಯುವ ಜಾಗತಿಕ ಸ್ಪರ್ಧೆಯಲ್ಲಿ) ರಾಷ್ಟ್ರೀಯ ಉಡುಗೆ, ಈಜುಡುಗೆ, ಪ್ರಶ್ನೋತ್ತರ ,ವಯಕ್ತಿಕ ಸಂದರ್ಶನ ಹೀಗೆ ಪ್ರತಿ ಸುತ್ತಿನಲ್ಲಿಯೂ ಉತ್ತಮ ಸಾಧನೆ ಮಾಡಿ ಅಂತಿಮವಾಗಿ 2024ನೇ ಸಾಲಿನ ಕಿರೀಟದೊಂದಿಗೆ ಇಡೀ ದೇಶವೇ ಹೆಮ್ಮೆ ಪಡುವ ಕ್ಷಣಗಳಿಗೆ ಮುನ್ನುಡಿ ಬರೆದ ಕನ್ನಡತಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿಯೇ ವೈದ್ಯಕೀಯ ಪದವಿ ಪಡೆದು ಚರ್ಮರೋಗ ತಜ್ಞೆಯಾಗುವ ಗುರಿಯೊಂದಿಗೆ ತುಮಕೂರಿನಲ್ಲಿ ಎಂ.ಡಿ.ಅಧ್ಯಯನ ಮಾಡುತ್ತಿದ್ದು ತಮ್ಮ ಭರತನಾಟ್ಯ ಪ್ರದರ್ಶನವನ್ನು ದುಬೈ,ಮಾಲ್ಡೀವ್ಸ್,ಭೂತಾನ್ ಮುಂತಾದ ದೇಶಗಳಲ್ಲಿ ನೀಡಿದ್ದಾರೆ .
ಹಿಟ್ಲರ್ ಕಲ್ಯಾಣ, ಮತ್ತೆ ಮಾಯಾಮೃಗ ಟಿವಿ ಧಾರಾವಾಹಿಗಳಲ್ಲಿ ಮಿಂಚಿರುವ ಈಕೆ , ಟಿ . ಎಸ್.ನಾಗಾಭರಣರ ಹೊಸ ಚಲನಚಿತ್ರ, ಅಲ್ಲದೇ ಮುಂದಿನ ತಿಂಗಳು ತೆರೆ ಕಾಣಲಿರುವ 12ನೆ ಶತಮಾನದ ಜಗಜ್ಯೋತಿ ಬಸವಣ್ಣನ ಕಥಾವಸ್ತು ಹೊಂದಿರುವ ದಿಲೀಪ್ ಶರ್ಮಾ ನಿರ್ದೇಶನದ ‘ಶರಣರ ಶಕ್ತಿ’ ಚಿತ್ರದಲ್ಲಿ ನಟಿಸಿದ್ದಾರೆ .ಜನುಮದಾತ ವೆಬ್ ಸೀರಿಸ್ನಲ್ಲೂ ಪಾತ್ರ ಮಾಡಿದ್ದಾರೆ.
*ಬಡವರ ವೈದ್ಯ*ನ ಪುತ್ರಿ: ಶೃತಿ ಅವರ ತಂದೆ ಡಾ.ಕೃಷ್ಣ ಮಹಾಬಲೇಶ್ವರ ಹೆಗಡೆ ಹುಬ್ಬಳ್ಳಿ ಉಣಕಲ್ ಕ್ರಾಸ್ ಬಳಿ ಬಡವರ ವೈದ್ಯರೆಂದೆ ಖ್ಯಾತರು. ಇಂದಿಗೂ 10 ರೂ.ಗೆ.ರೋಗಿಗಳ ತಪಾಸಣೆ ಮಾಡುತ್ತ ಚಿಕಿತ್ಸೆ ನೀಡುತ್ತ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಸರು ಮಾಡಿದ್ದಾರೆ.ತಾಯಿ ಕಮಲಾ ಹೆಗಡೆ ’ಭಾರತಕ್ಕೆ ಇದುವರೆಗೆ ಈ ಪ್ರಶಸ್ತಿ ಬಂದಿರಲಿಲ್ಲ. ಆ ಕೊರತೆ ಶೃತಿ ನೀಗಿಸಿದ್ದಾರೆ’ ಎಂದು ಖುಷಿಯಿಂದ ಹೇಳುತ್ತಾರೆ.
*ತವರೂರ ಸನ್ಮಾನ* : ಇಂದು( July 14) ಹುಬ್ಬಳ್ಳಿ ಲಿಂಗರಾಜ ನಗರ ಸಮುದಾಯ ಭವನದಲ್ಲಿ ಡಾ.ಶೃತಿ ಹೆಗಡೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಗಣ್ಯರು, ರಾಜಕೀಯ ಮುಖಂಡರು, ವಿವಿಧ ಮಹಿಳಾ ಮಂಡಳಗಳು, ಚಿತ್ರನಟರು ಸಹಿತ ದೊಡ್ಡ ಪ್ರಮಾಣದಲ್ಲಿ ಸೇರಲಿದ್ದು ಮೆರವಣಿಗೆ ಮೂಲಕ ಕರೆ ತರುತ್ತಿರುವುದು ವಿಶೇಷವಾಗಿದೆ.