*ಭುವನೇಶ್ವರಿ ಜ್ಯುವೆಲರ್ಸ ಕಳುವಿನ ಪ್ರಕರಣ* / *ವಿಚಾರಣೆಗೆ ಕರೆದೊಯ್ಯುವ ವೇಳೆ ಘಟನೆ*/ *ಮಹಿಳಾ ಪಿಎಸ್ಐನಿಂದ ಗುಂಡು- ಇಬ್ಬರು ಪೇದೆಗಳಿಗೂ ಗಾಯ* / *ಅಂತಾರಾಜ್ಯ ಕಳ್ಳ ಫರ್ಹಾನ ಮೇಲೆ 15ಕ್ಕೂ ಹೆಚ್ಚು ಕೇಸ್*
ಹುಬ್ಬಳ್ಳಿ : ಕೇಶ್ವಾಪುರದ ಮುಖ್ಯ ರಸ್ತೆಯಲ್ಲಿರುವ ಭುವನೇಶ್ವರಿ ಜ್ಯುವೆಲರ್ಸ ಆಭರಣ ಅಂಗಡಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಮುಂಬೈ ಮೂಲದ ಕುಖ್ಯಾತ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಬೆಳಿಗ್ಗೆ 6-30ರ ಸುಮಾರಿಗೆ ಗಾಮನಗಟ್ಟಿ ರಸ್ತೆಯ ತಾರಿಹಾಳ ಕ್ರಾಸ್ ಬಳಿ ಅಂತಾರಾಜ್ಯ ಕಳ್ಳ ಫರ್ಹಾನ್ ಶೇಖ್ ಪರಾರಿಯಾಗಲು ಯತ್ನ ನಡೆಸಿದಾಗ ಪಿಐ ಹತ್ತಿ ಮತ್ತು ಪಿಎಸ್ಐ ಕವಿತಾ ಮಡಗ್ಯಾಳ ಎಚ್ಚರಿಕೆ ನೀಡಿದರೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಓಡಲು ಯತ್ನಿಸಿದಾಗ ಪಿಎಸ್ಐ ಕವಿತಾ ಗಾಳಿಯಲ್ಲಿ ಎರಡು ಗುಂಡು ಹಾರಿಸಿದ್ದಾರೆ.
ಆರೋಪಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾದಾಗ ಮಹಿಳಾ ಸಬ್ ಇನ್ ಸ್ಪೆಕ್ಟರ್ ಕವಿತಾ ಓಡಿ ಹೋಗಲು ಯತ್ನಿಸಿದ ಫರ್ಹಾನ ಕಾಲಿಗೆ ಗುಂಡು ಹಾರಿಸಿದ್ದು ಗಾಯಗೊಂಡ ಆತನನ್ನು ಪುನಃ ವಶಕ್ಕೆ ಪಡೆದು ಕಿಮ್ಸ್ ಗೆ ದಾಖಲು ಮಾಡಿದ್ದಾರೆ.ಅಲ್ಲದೇ ಆರೋಪಿಯಿಂದ ಹಲ್ಲೆಗೊಳಗಾದ ಸಿಬ್ಬಂದಿಗಳಾದ ಮಹೇಶ ಮತ್ತು ಸುಜಾತಾ ಅವರ ಕಾಲಿಗೂ ಗಾಯವಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿ ಸಿಬ್ಬಂದಿ ಮತ್ತು ಆರೋಪಿ ಆರೋಗ್ಯ ವಿಚಾರಿಸಿದ್ದಾರೆ.
ಕುಖ್ಯಾತ ದರೋಡೆಕೋರ,ಕಳ್ಳನಾಗಿರುವ ಫರ್ಹಾನ ಮೇಲೆ ಹೈದ್ರಾಬಾದ್, ಅಹ್ಮದನಗರ, ಕಲಬುರಗಿ, ಸೂರತ್ ಮುಂಬೈನಗರ ಸೇರಿ ವಿವಿಧ ಕಡೆ 15ಕ್ಕೂ ಹೆಚ್ಚು ಕೇಸ್ಗಳಿವೆ.