*ವಿದ್ಯಾ ಕಾಶಿಗೆ ಗೌನ್ ಭಾಗ್ಯ ಕರುಣಿಸಿದ ರಾಜ್ಯ ಸರ್ಕಾರ*
ಬೆಂಗಳೂರು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಇಂದು ಗುರುವಾರ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡುವ ಸರ್ಕಾರ ಧಾರವಾಡದ ಜನತೆಯ ಬಾಯಿಗೆ ಪೇಡೆ ಹಾಕಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹುಬ್ಬಳ್ಳಿಯಿಂದ ಧಾರವಾಡವನ್ನು ಪ್ರತ್ಯೇಕಿಸಿ ಮತ್ತೊಂದು ಮಹಾನಗರ ಪಾಲಿಕೆ ರಚನೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ್ ಸಂಪುಟದ ನಿರ್ಣಯ ಮಾಧ್ಯಮಗಳಿಗೆ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರಸ್ತುತ ಇರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ.1 ರಿಂದ 26 ಅನ್ನು ಸೇರಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚಿಸಲಾಗುತ್ತದೆ. ವಾರ್ಡ್ ನಂ.27 ರಿಂದ 82 ರವರೆಗಿನ ಪ್ರದೇಶಗಳನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆಯನ್ನಾಗಿ ಮುಂದುವರೆಸಲು ಅನುಮತಿ ನೀಡಲಾಗಿದೆ.
2014ರಲ್ಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಮಾಡಬೇಕೆಂದು ಒತ್ತಾಯ ಬಂದಿತ್ತು .ಈಗ ವಿದ್ಯಾನಗರಿಯ ಜನಸಂಖ್ಯೆ 6.5 ಲಕ್ಷ ದಾಟಿರುವುದರಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೆಂದು ಹೋರಾಟ ಸಮಿತಿ ಎಡೆಬಿಡದೆ ಯತ್ನ ನಡೆಸಿತ್ತಲ್ಲದೆ ಪಕ್ಷಾತೀತವಾಗಿ ಸಹ ಒತ್ತಾಯ ಕೇಳಿಬಂದಿತ್ತು.
ಸಂಪುಟ ಸಭೆಯ ಇತರ ಪ್ರಮುಖ ನಿರ್ಧಾರಗಳು
*1)ನಾಲ್ಕು ಸಾರಿಗೆ ನಿಗಮಗಳಲ್ಲಿ ಶೇ. 15 ರಷ್ಟು ದರ ಹೆಚ್ಚಳ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ*
*2)ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನವನ್ನು ವಿನಿಯೋಗಿಸಲು ಆಡಳಿತಾತ್ಮಕ ಅನುಮೋದನೆ*
3)ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕಾನೂನು ಮಾಪನ ಶಾಸನ ಇಲಾಖೆ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಲ್ಲಿ ರಾಜ್ಯದ ರೈತರಿಂದ ಭತ್ತ ಮತ್ತು ಬಿಳಿ ಜೋಳ ಖರೀದಿಸಲು ಅವಶ್ಯವಿರುವಂತಹ 580 ಗ್ರಾಂ ತೂಕದ 15 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು 10 ಕೋಟಿ 88ಲಕ್ಷ ಗಳ ಅಂದಾಜು ವೆಚ್ಚದಲ್ಲಿ ಆವರ್ತಕನಿಧಿ ಅಡಿಯಲ್ಲಿ ರಾಗಿಯನ್ನು ಖರೀದಿಸಲು ಅವಶ್ಯವಿರುವಂತಹ 775 ಗ್ರಾಂ ತೂಕದ 74.82 ಲಕ್ಷ ಸೆಣಬಿನ ಗೋಣಿ ಚೀಲಗಳನ್ನು *ಜೆಮ್* ಪೋರ್ಟಲ್ ಮೂಲಕ ಖರೀದಿಸಲು ಅನುಮೋದನೆ.
4)ಕೆಐಡಿಬಿ ಸಾಲದ ಮಿತಿ 5000 ಕೋಟಿ ರೂ. ಹೆಚ್ಚಳ*