*ಅಬ್ಬಯ್ಯ, ಬೆಲ್ಲದ, ಟೆಂಗಿನಕಾಯಿ ಭಾಗಿ/ ನಗರದ ಯೋಜನಾಬದ್ಧ ಬೆಳವಣಿಗೆ ಬಗ್ಗೆ ಅಧ್ಯಯನ, ಚರ್ಚೆ*
ಹುಬ್ಬಳ್ಳಿ : ಉತ್ತರ ಕರ್ನಾಟಕದ ಜನ ಪ್ರತಿನಿಧಿಗಳಿಗೆ ಅಭಿವೃದ್ಧಿ ವಿಷಯ ಬಂದಾಗಲೂ ತಮ್ಮ ರಾಜಕೀಯವೇ ಮುಖ್ಯವಾಗಿ ಒಂದಾಗುವುದಿಲ್ಲ ಎಂಬುದು ಸರ್ವೆ ಸಾಮಾನ್ಯವಾಗಿ ಕೇಳಿ ಬರುವ ಮಾತು. ಆದರೆ ಅದಕ್ಕೆ ಅಪವಾದವೆಂಬಂತೆ ಹುಬ್ಬಳ್ಳಿ ಧಾರವಾಡ ಅವಳಿನಗರದ ಮೂವರು ಶಾಸಕರು ( ಒಬ್ಬರು ಕಾಂಗ್ರೆಸ್, ಇಬ್ಬರು ಬಿಜೆಪಿ ಶಾಸಕರು )ಅಹಮದಾಬಾದಿನಲ್ಲಿ ನಡೆದ ನಗರದ ಯೋಜನಾ ಬದ್ಧ ಬೆಳವಣಿಗೆ ಕುರಿತ ಸಭೆಯಲ್ಲಿ ಪಾಲ್ಗೊಂಡು ಮಹಾನಗರದ ಬೆಳವಣಿಗೆಗೆ ಶ್ರಮಿಸುವ ಪ್ರಾಮಾಣಿಕ ಕಾಳಜಿ ತೋರಿದ್ದಾರೆ.
ಗುಜರಾತ ರಾಜ್ಯದ ಗಿಫ್ಟ್ ಸಿಟಿ (Gujarat international finance and tech city) ನಗರದ ಯೋಜನಾಬದ್ದ ಬೆಳವಣಿಗೆಗಳ ಬಗ್ಗೆ ಇಂದು ಅಹ್ಮದಾಬಾದಗೆ ಭೇಟಿ ನೀಡಿ ಅಲ್ಲಿನ ವಿವಿಧ ಬೆಳವಣಿಗೆಗಳ ಬಗ್ಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ, ಅರವಿಂದ್ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ನೇತೃತ್ವದ ತಂಡ ಇಂದು ಚರ್ಚೆ ನಡೆಸಿದೆ.
ಹುಡಾ ಚೇರಮನ್ ಶಾಕೀರ ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹುಡಾ ಆಯುಕ್ತ ಸಂತೋಷ್ ಬಿರಾದಾರ, ಟಿಪಿಎಂ ಸಿ.ಬಿ.ಮುಧೋಳಕರ,ಟಿಪಿ ಮೌನೇಶ್ ಬಡಿಗೇರ ಮುಂತಾದವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗಿಫ್ಟ್ ಸಿಟಿ ಚೀಪ್ ಟೌನ್ ಪ್ಲಾನರ್ ಲೋವೇಲೀನ್ ಗರ್ಗ, ನಗರ ಯೋಜನೆ ಎಸಿಟಿಪಿ ಹರ್ಪಲ್ ದವೆ ಸಮಗ್ರ ಮಾಹಿತಿ ನೀಡಿದರು.
ಬಿಆರ್ಟಿಎಸ್, ಸ್ಮಾರ್ಟ್ ಸಿಟಿ ಯೋಜನೆ ಅವಳಿನಗರದಲ್ಲಿ ಹಲವು ಆವಾಂತರ ಸೃಷ್ಟಿಸಿದ ಉದಾಹರಣೆ ಕಣ್ಣ ಮುಂದೆ ಇದ್ದು ಹೀಗಿರುವಾಗ ನಗರಾಭಿವೃದ್ಧಿ ಪ್ರಾಧಿಕಾರದ ನೇತೃತ್ವದ ನಿಯೋಗ ನಗರ ಯೋಜನಾ ಬದ್ಧ ಬೆಳವಣಿಗೆ ಕುರಿತ ಸಭೆಯಲ್ಲಿ ಪಾಲ್ಗೊಂಡಿದ್ದು ಮುಂದಿನ ದಿನಗಳಲ್ಲಿ ಸ್ವಲ್ಪವಾದರೂ ಪರಿಸ್ಥಿತಿ ಸುಧಾರಿಸುವ ಯತ್ನ ನಡೆಯಬೇಕಾಗಿದೆ.