*ದಕ್ಷಿಣ ಎಸಿಪಿ ಅಮಾನತಿನೊಂದಿಗೆ ನಾಲ್ಕನೇ ವಿಕೆಟ್ ಪತನ / ನೂತನ ಡಿಸಿಪಿಯಾಗಿ ಕುಶಾಲ ಚೌಕ್ಸೆ / ಅಂಜಲಿ, ನೇಹಾ ಕುಟುಂಬಗಳಿಗೆ ಸಾಂತ್ವನ ಹೇಳಿ ಅವರ ಅಹವಾಲು ಆಲಿಸಿದ ಗೃಹ ಸಚಿವರು*
ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಇಂದು ವಿಪಕ್ಷಗಳು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸರಣಿ ಕೊಲೆಗಳು ಖಾಕಿ ಪಡೆಯ ಸಾಮರ್ಥ್ಯವನ್ನೇ ಪ್ರಶ್ನಿಸುತ್ತಿರುವ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಇಂದು ಭೇಟಿ ನೀಡಿ ದಿ. 15ರಂದು ಕೊಲೆಯಾದ ಅಂಜಲಿ ಅಂಬಿಗೇರ ಹಾಗೂ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ನೇಹಾ ಹಿರೇಮಠ ಅವರ ನಿವಾಸಗಳಿಗೆ ತೆರಳಿ ಸಾಂತ್ವನ ಹೇಳಿದರು.
ಅಂಜಲಿ ಕುಟುಂಬದ ಸದಸ್ಯರ ಅಹವಾಲು ಆಲಿಸಿದ ಅವರು ನೀತಿ ಸಂಹಿತೆ ನಂತರ ಕರೆ ಮಾಡಿ ಪರಿಹಾರದ ಬಗ್ಗೆ ತಿಳಿಸುವುದಾಗಿ ಹೇಳಿದರಲ್ಲದೇ ಸೂರಿನ ವ್ಯವಸ್ಥೆ ಅಲ್ಲದೇ ಅಂಜಲಿ ಸಹೋದರಿಯೊಬ್ಬರಿಗೆ ಉದ್ಯೋಗ ದೊರಕಿಸುವ ಭರವಸೆ ನೀಡಿದರು. ಸಚಿವರ ಜತೆ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರೆಡ್ಡಿ, ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅನಿಲ್ ಕುಮಾರ್ ಪಾಟೀಲ್, ಮನೋಜ್ ಕರ್ಜಗಿ ಇತರರು ಇದ್ದರು.
ಗೃಹ ಸಚಿವರು ನೇಹಾ ಹಿರೇಮಠ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದ ಸಂದರ್ಭದಲ್ಲಿ ತಂದೆ ನಿರಂಜನ ಹಿರೇಮಠ ಕೆಲ ಕಾಲ ಗುಪ್ತ ಚರ್ಚೆ ನಡೆಸಿ ಕೆಲ ಮಾಹಿತಿ ನೀಡಿದರು.
ತದನಂತರ ಮಾಧ್ಯಮದವರ ಜತೆ ಡೆನಿಸನ್ಸ್ ಹೊಟೆಲ್ನಲ್ಲಿ ಮಾತನಾಡಿದ ಅವರು ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸ್ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈಗಾಗಲೇ ಡಿಸಿಪಿ, ಇನ್ಸಪೆಕ್ಟರ್ , ಮುಖ್ಯ ಪೇದೆ ಅಮಾನತುಗೊಳಿಸಲಾಗಿದೆ.
ಈಗಾಗಲೇ ಆರೋಪಿ ಬಂಧನವೂ ಆಗಿದೆ.ಈ ಪ್ರಕರಣವನ್ನೂ ಸಿಐಡಿ ತನಿಖೆಗೆ ವಹಿಸಲಾಗುವುದು. ಇಂದು ಅಥವಾ ನಾಳೆ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ ಎಂದರು.
ನೇಹಾ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಕೇಳಿದಾಗ ಅದರ ಅವಶ್ಯಕತೆ ಇಲ್ಲ. ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ಮಾಡುತ್ತಿದ್ದಾರೆಂದರು.
ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಅಂಕಿ ಅಂಶಗಳ ಮೂಲಕ ಟಾಂಗ್ನೀಡಿದ ಅವರು 2021ರ ಜನವರಿಯಿಂದ ನಾಲ್ಕು ತಿಂಗಳಗಳಂತೆ ನಾಲ್ಕು ವರ್ಷಗಳಲ್ಲಿ ಆದ ವಿವರ ಬಿಚ್ಚಿಟ್ಟು ಮೂರು ವರ್ಷ ಕಾಲ ಅವರೇ ಅಧಿಕಾರದಲ್ಲಿದ್ದರೂ ಆಗಲು ಪ್ರಸಕ್ತ ಅಂಕಿ ಸಂಖ್ಯೆಗಳಿಗಿಂತಲೂ ಹೆಚ್ದಾಗಿವೆ. ಅಂದರೆ ಬಿಜೆಪಿ ಕಾಲದಲ್ಲಿ ಆಗಲಿ ನಮ್ಮ ಕಾಲದಲ್ಲಿ ಆಗಲಿ ಕೊಲೆ ಆಗಿರುವುದು ನಿಜ ಆಗ ಕಾನೂನು ಸುವ್ಯವಸ್ಥೆ ಹಾಳಾಗಿರಲಿಲ್ಲವೇ ಎಂದು ಟಾಂಗ್ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪೊಲೀಸ್ ಇಲಾಖೆಯಲ್ಲಿ ಯಾವುದೇ ಜಾತಿ ಧರ್ಮದ ಪ್ರಶ್ನೆ ಬರುವುದಿಲ್ಲ. ಕೊಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಬಂಧಿಸುತ್ತೇವೆ. ಮಾದಕ ವಸ್ತುಗಳ ವಿರುದ್ಧ ಸಮರ ಆರಂಭಿಸಿದ್ದೇವೆ. ಈಗಾಗಲೇ ಸುಮಾರು 200ಕೋಟಿ ಮೌಲ್ಯದ ಡ್ರಗ್ಸ್ ಸುಟ್ಟು ಹಾಕಲಾಗಿದೆ. ಅದಕ್ಕೆ ಪೂರ್ಣ ಬಂದ್ ಮಾಡುವ ಯತ್ನ ಮುಂದುವರಿಯಲಿದೆ ಎಂದರು.
*ಎಸಿಪಿ ಅಮಾನತು* : ತಪ್ಪು ಮಾಡಿದವರು ಯಾರೇ ಇದ್ದರೂ ಕ್ರಮ ನಿಶ್ಚಿತ ಎಂದು ಡಾ. ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಬೆನ್ನ ಹಿಂದೆಯೆ ದಕ್ತಿಣ ವಿಭಾಗದ ಎಸಿಪಿ ವಿಜಯಕುಮಾರ ಅವರನ್ನೂ ಸರ್ಕಾರ ಅಮಾನತ್ತುಗೊಳಿಸಿದ್ದು ಅಂಜಲಿ ಪ್ರಕರಣದಲ್ಲಿ ನಾಲ್ಕನೇ ತಲೆದಂಡವಾಗಿದೆ.
*ನೂತನ ಡಿಸಿಪಿ* : ಅಮಾನತುಗೊಂಡ ಹುಬ್ಬಳ್ಳಿ ಧಾರವಾಡ ಡಿಸಿಪಿ ರಾಜೀವ ಜಾಗೆಯಲ್ಲಿ ಐಪಿಎಸ್ ಅಧಿಕಾರಿ ಕುಶಾಲ ಚೌಕ್ಸೆ ನೇಮಕಗೊಂಡಿದ್ದಾರೆ. ಇದುವರೆಗೆ ವಿಧಿ ವಿಜ್ಞಾವ ವಿಭಾಗದ ಜಂಟಿ ನಿರ್ದೇಶಕರಾಗಿರುವ 2018ನೇ ಬ್ಯಾಚಿನ ಕರ್ನಾಟಕ ಕೇಡರ್ ಅಧಿಕಾರಿಯನ್ನು ನಿಯುಕ್ತಿಗೊಳಿಸಿದೆ.
ಅಂಜಲಿ ಕುಟುಂಬಕ್ಕೆ ಇಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮತ್ತು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಭೇಟಿ ನೀಡಿ ಸಾಂತ್ವನ ಹೇಳಿದರು.